ಬಾಕ್ಸಾಫೀಸ್‌ನಲ್ಲಿ ರಾಮಾಯಣ ಹೊಸ ಇತಿಹಾಸ: 12 ದಿನಕ್ಕೆ RRR ದಾಖಲೆ ಉಡೀಸ್‌

ಸುದ್ದಿ ಸಂಗ್ರಹ

ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ ಸಿನಿಮಾದ ಅಬ್ಬರ ಮುಂದುವರಿದಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಸಿನಿಮಾ ಬಿಡುಗಡೆಯಾದ 12 ದಿನಗಳಲ್ಲಿ ಎಸ್‌ಎಸ್ ರಾಜಮೌಳಿಯ ‘ಆರ್‌ಆರ್‌ಆರ್’ ಚಿತ್ರದ ಭಾರತೀಯ ಕಲೆಕ್ಷನ್ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದೆ.

ಎರಡನೇ ವಾರಾಂತ್ಯದಲ್ಲಿ ಭರ್ಜರಿ ಗಳಿಕೆ ಕಂಡಿರುವ ರಾಮಾಯಣ, ಶನಿವಾರ 72.90 ಕೋಟಿ ರೂ. ಮತ್ತು ರವಿವಾರ 75 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ ವಾರದ ಮೊದಲ ದಿನವಾದ ಸೋಮವಾರ (12ನೇ ದಿನ) ಸಹಜವಾಗಿಯೇ ಗಳಿಕೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಭಾರತದಲ್ಲಿ 32 ಕೋಟಿ ರೂ. ನಿವ್ವಳ ಗಳಿಕೆ ಕಂಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನಿವ್ವಳ ಕಲೆಕ್ಷನ್ 792.60 ಕೋಟಿ ರೂ.ಗೆ ತಲುಪಿದೆ.

ಆರ್‌ಆರ್‌ಆರ್ ಸಿನಿಮಾ ಭಾರತದಲ್ಲಿ ಒಟ್ಟಾರೆ 782.20 ಕೋಟಿ ರೂ. ನಿವ್ವಳ ಗಳಿಸಿತ್ತು. ಈಗ ರಾಮಾಯಣ ಎರಡು ವಾರ ಕಳೆಯುವ ಮುನ್ನವೇ ಆ ದಾಖಲೆಯನ್ನು ಬ್ರೇಕ್‌ ಮಾಡಿದೆ. ಇನ್ನು ವಿಶ್ವದಾದ್ಯಂತ ರಾಮಾಯಣ 12 ದಿನಗಳಲ್ಲಿ ಬರೋಬ್ಬರಿ 1,437.25 ಕೋಟಿ ರೂ. ಬಾಚಿಕೊಂಡಿದೆ. ಇದರಲ್ಲಿ ಭಾರತದಿಂದ 947.25 ಕೋಟಿ ರೂ. ಹಾಗೂ ವಿದೇಶಿ ಮಾರುಕಟ್ಟೆಗಳಿಂದ 490 ಕೋಟಿ ರೂ. ಗಳಿಕೆಯಾಗಿದೆ.

ಸದ್ಯ ಬಾಕ್ಸ್ ಆಫೀಸ್‌ನಲ್ಲಿ ನಾಗಾಲೋಟ ಮುಂದುವರಿಸಿರುವ ರಾಮಾಯಣ, ಈಗ ಅಲ್ಲು ಅರ್ಜುನ್ ಅವರ ‘ಪುಷ್ಪ 2’ ಚಿತ್ರದ 1,742.10 ಕೋಟಿ ರೂ. ವಿಶ್ವದಾಖಲೆ ಮುರಿಯುವತ್ತ ಕಣ್ಣಿಟ್ಟಿದೆ.

Leave a Reply

Your email address will not be published. Required fields are marked *