ಸುದ್ದಿ ಸಂಗ್ರಹ ಕಲಬುರಗಿ
ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್ಸಿ) 2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ 319 ಹುದ್ದೆಗಳ ಭರ್ತಿಗೆ ನಗರದ 29 ಕೇಂದ್ರಗಳಲ್ಲಿ ನಡೆದ ಪೂರ್ವಭಾವಿ ಪರೀಕ್ಷೆಗೆ 4,947 ಅಭ್ಯರ್ಥಿಗಳು ಗೈರಾದರು.
ಒಟ್ಟು 11,745 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ ಬೆಳಿಗ್ಗೆ 10ರಿಂದ ನಡೆದ ಪತ್ರಿಕೆ-1ರ ಪರೀಕ್ಷೆಗೆ 6,849 ಅಭ್ಯರ್ಥಿಗಳು ಹಾಜರಾದರೆ, 4,896 ಜನ ಗೈರಾದರು. ಮಧ್ಯಾಹ್ನ 2ರಿಂದ ನಡೆದ ಪತ್ರಿಕೆ-2 ಪರೀಕ್ಷೆಗೆ 6,798 ಅಭ್ಯರ್ಥಿಗಳು ಹಾಜರಾದರೆ, 4,947 ಜನ ಗೈರಾದರು. ಅಂಗವಿಕಲ ಅಭ್ಯರ್ಥಿಗಳು ಸೇಡಂ ರಸ್ತೆಯ ಸರ್ಕಾರಿ ಸ್ವಾಯತ್ತ ಪದವಿ ಕಾಲೇಜಿನ ಪ್ರತ್ಯೇಕ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಎದುರಿಸಿದರು.
ಪರೀಕ್ಷೆಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಲು ಈ ಬಾರಿ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪರೀಕ್ಷಾ ಕೇಂದ್ರದಲ್ಲಿ ಮೊದಲ ಬಾರಿಗೆ ನೆಟ್ವರ್ಕ್ ಬರದಂತೆ ಜಾಮರ್ ಅಳವಡಿಸಲಾಗಿತ್ತು. ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವೆಬ್ ಕಾಸ್ಟಿಂಗ್ ವೀಕ್ಷಣಾ ಕೇಂದ್ರ ಸ್ಥಾಪಿಸಲಾಗಿತ್ತು.
ಬಯೋ ಮೆಟ್ರಿಕ್, ಫೇಸ್ ರೆಕಗ್ನೈಸೇಷನ್ ಜೊತೆಗೆ ಇಎನ್ಟಿ ತಜ್ಞರು ತಪಾಸಣೆ ನಡೆಸಿದ ಬಳಿಕವೇ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಗೆ ತೆರಳಲು ಅವಕಾಶ ನೀಡಲಾಯಿತು. ಸೂಪರ್ ಮಾರ್ಕೆಟ್ ಪ್ರದೇಶದ ಸರ್ಕಾರಿ ಪ್ರೌಢಶಾಲೆ (ಎಂಪಿಎಚ್ಎಸ್) ಕೇಂದ್ರಕ್ಕೆ ಜೀನ್ಸ್ ವಸ್ತ್ರ ಧರಿಸಿ ಬಂದ ಅಭ್ಯರ್ಥಿಗಳಿಗೆ ಹಿರಿಯ ಅಧಿಕಾರಿಗಳ ಅನುಮತಿ ಬಳಿಕ, ಎರಡೆರಡು ಬಾರಿ ತಪಾಸಣೆ ನಡೆಸಿ ಒಳಗಡೆ ಬಿಡಲಾಯಿತು.
ಹಳೆ ಎಸ್ಪಿ ಕಚೇರಿ ಎದುರಿನ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಮಹಿಳಾ ಅಭ್ಯರ್ಥಿಯೊಬ್ಬರು ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ವಿಎಒ ಪರೀಕ್ಷೆಯ ಪ್ರವೇಶ ಪತ್ರ ತಂದ ಪ್ರಸಂಗ ಜರುಗಿತು. ಈ ವಿಷಯ ಅವರಿಗೆ ಗೊತ್ತಾಗುತ್ತಿದ್ದಂತೆ ಮತ್ತು ಪರೀಕ್ಷಾ ಕೇಂದ್ರದ ಪ್ರವೇಶ ಸಮಯ ಮುಗಿಯುತ್ತಾ ಬಂದಿದ್ದರಿಂದ ಅವರು ವಾಪಸ್ ತೆರಳಿದರು ಎಂದು ಮೂಲಗಳು ತಿಳಿಸಿವೆ.
ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗೃಹರಕ್ಷಕ ದಳ ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.