ಪಿಂಚಣಿ ಮರುಪಡೆಯಲು ತಕ್ಷಣ ದಾಖಲೆ ಸಲ್ಲಿಸಿ: ಜಿಲ್ಲಾಧಿಕಾರಿ ಇಕ್ರಂ ಶರೀಫ್

ಜಿಲ್ಲೆಯ

ಸುದ್ದಿ ಸಂಗ್ರಹ ಕಲಬುರಗಿ
ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ತಡೆಹಿಡಿಯಲಾದ ಪಿಂಚಣಿಯನ್ನು ಮರುಪಡೆಯಲು ಅಗತ್ಯ ದಾಖಲೆಗಳನ್ನು ತಹಸೀಲ್ದಾರ್ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ.

ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯಲ್ಲಿ ವಯಸ್ಸಿನ ವ್ಯತ್ಯಾಸವಾಗಿದ್ದಲ್ಲಿ, ಆದಾಯ ತೆರಿಗೆ ಪಾವತಿಸುತ್ತಿರುವುದು, ಯುಡಿಐಡಿ ಕಾರ್ಡ್ ಇಲ್ಲದಿರುವುದು ಮತ್ತು ಈ ಹಿಂದಿನ ಮಾನದಂಡದಂತೆ ಕುಟುಂಬದ ವಾರ್ಷಿಕ ಆದಾಯ 32 ಸಾವಿರಕ್ಕಿಂತ ಹೆಚ್ಚಿರುವವರ ಪಿಂಚಣಿಯನ್ನು ಸರ್ಕಾರವು ಅನುಮಾನಾಸ್ಪದ ಎಂದು ಗುರುತಿಸಿ ತಾತ್ಕಾಲಿಕವಾಗಿ ತಡೆಹಿಡಿದಿದೆ ಎಂದರು.

ಈಗಾಗಲೇ ಸಂಯೋಜನೆ ಮೊಬೈಲ್ ಆ್ಯಪ್ ಮೂಲಕ ಗ್ರಾಮ ಆಡಳಿತಾಧಿಕಾರಿಗಳು ಭೌತಿಕ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ವೇಳೆ ವಿಳಾಸದಲ್ಲಿ ಲಭ್ಯವಿಲ್ಲದ ಹಾಗೂ ಇನ್ನೂ ಪರಿಶೀಲನೆಗೆ ಒಳಪಡದ ಅರ್ಹ ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಮುಂದುವರಿಸಲು ಕೆಲ ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕಾಗಿದೆ. ಅರ್ಹರು ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ, ಬಿಪಿಎಲ್ ಪಡಿತರ ಚೀಟಿ ಮತ್ತು ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಕಡಿಮೆ ಇರುವ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ಇದರೊಂದಿಗೆ ಅಂಗವಿಕಲ ಪಿಂಚಣಿದಾರರು ಯುಡಿಐಡಿ ಕಾರ್ಡ್ ಹಾಗೂ ನಿರ್ಗತಿಕ ವಿಧವಾ ಪಿಂಚಣಿದಾರರು ಗಂಡನ ಮರಣ ಪ್ರಮಾಣ ಪತ್ರವನ್ನು ಲಗತ್ತಿಸುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

ಅರ್ಹ ಫಲಾನುಭವಿಗಳು ಈ ಎಲ್ಲಾ ಅಗತ್ಯ ದಾಖಲೆಗಳನ್ನು ತಮ್ಮ ವ್ಯಾಪ್ತಿಯ ತಹಸೀಲ್ದಾರ್ ಕಚೇರಿಗೆ ಸಲ್ಲಿಸಿದರೆ ಸ್ಥಗಿತಗೊಂಡಿರುವ ಪಿಂಚಣಿ ನಿಯಮಾನುಸಾರ ಮರು ಚಾಲನೆಗೊಳಿಸಲಾಗುವುದು. ಒಂದು ವೇಳೆ ನಿಗದಿತ ಸೂಕ್ತ ದಾಖಲೆಗಳನ್ನು ಸಲ್ಲಿಸದೆ ಇದ್ದಲ್ಲಿ ಅಂತಹ ಫಲಾನುಭವಿಗಳ ಪಿಂಚಣಿಯನ್ನು ಕಾಯಂ ಆಗಿ ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *