ಸುದ್ದಿ ಸಂಗ್ರಹ ಯಾದಗಿರಿ
ವಿದ್ಯುತ್ ಕಂಬಕ್ಕೆ ಬುಲೆರೋ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ 3 ಜನ ಕಾರ್ಮಿಕರು ಸಾವನ್ನಪ್ಪಿದ್ದು, 15 ಜನ ಗಾಯಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಡ್ನಾಳ್ ಗ್ರಾಮದ ಬಳಿ ನಡೆದಿದೆ.
ಭಾಗ್ಯಶ್ರೀ (35), ಸತ್ಯಮ್ಮ (30), ಹೊನ್ನಿಂಗಮ್ಮ (18) ಮೃತ ಕಾರ್ಮಿಕರು. ಚಾಲಕನ ನಿಯಂತ್ರಣ ತಪ್ಪಿ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮೂವರು ಕಾರ್ಮಿಕರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಕಾರ್ಮಿಕರನ್ನು ಶಹಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರ್ಮಿಕರು ಬೆಳಗಿನ ಜಾವ ಮಡ್ನಾಳ್ ಗ್ರಾಮದ ಸುತ್ತಮುತ್ತಲಿನ ಜಮೀನಿನಲ್ಲಿ ಹತ್ತಿ ಕಸ ತೆಗೆಯುವ ಕೂಲಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಮನೆಗೆ ವಾಪಸ್ ಬರುವಾಗ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಭೀಮರಾಯನ ಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.