ಕಲಬುರಗಿ: ಲಾಠಿ ಚಾರ್ಜ್ ಖಂಡಿಸಿ ಬೀದಿಗಿಳಿದ ವಿದ್ಯಾರ್ಥಿಗಳು

ನಗರದ

ಸುದ್ದಿ ಸಂಗ್ರಹ ಕಲಬುರಗಿ
ನೀಟ್ ಅಕ್ರಮಕ್ಕೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ನೂರಾರು ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

‍ಪ್ರಜಾಸತ್ತಾತ್ಮಕ ಚಿಂತನ ವೇದಿಕೆ ನೇತೃತ್ವದಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು, ರೈತ, ದಲಿತ, ಮಹಿಳಾ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಈ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿ ಸಂಘಟನೆಗಳೊಂದಿಗೆ ಹೋರಾಟಗಾರರು, ಚಿಂತಕರು, ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ದೇಶದ ವಿದ್ಯಾರ್ಥಿಗಳು ನಾಲ್ಕು ಬೇಡಿಕೆಗಳನ್ನು ಇಟ್ಟುಕೊಂಡು ದೆಹಲಿಯ ಜಂತರ್ ಮಂತರ್‌ನಿಂದ ಸಂಸತ್‌ ಭವನದವರೆಗೆ ಶಾಂತ ರೀತಿಯಿಂದ ಮೆರವಣಿಗೆ ಮಾಡುವಾಗ ಸರ್ಕಾರವು ಪೊಲೀಸ್ ಮತ್ತು ಖಾಸಗಿ ಗೂಂಡಾಗಳ ಮೂಲಕ ವಿದ್ಯಾರ್ಥಿಗಳ ಮೇಲೆ ಬರ್ಬರ ಹಲ್ಲೆ ಮಾಡಿದ್ದಾರೆ. ಅನೇಕ ವಿದ್ಯಾರ್ಥಿಗಳ ಕೈ ಕಾಲು ಮುರಿದಿವೆ. ವಿದ್ಯಾರ್ಥಿನಿಯರನ್ನೂ ಎಳೆದಾಡಿ ದಾಳಿ ಮಾಡಿದ್ದರು. ಈ ಕ್ರೂರ ದಾಳಿಯನ್ನು ಮಾನವೀಯ ಮನಸ್ಸುಳ್ಳವರು ತೀವ್ರವಾಗಿ ಖಂಡಿಸಬೇಕಿದೆ ಎಂದರು.

ನೀಟ್ ಪ್ರಶ್ನೆ ಪತ್ರಿಕೆಯು ಸೋರಿಕೆಯಾಗಿದ್ದರಿಂದ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋರಿಕೆಯಲ್ಲಿ ತೀವ್ರ ಭ್ರಷ್ಟಾಚಾರ, ಅಕ್ರಮ ನಡೆದಿದೆ. ಇದಕ್ಕೆ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಅಕ್ರಮ ತಡೆಗಟ್ಟುವಲ್ಲಿ ವಿಫಲವಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಬೇಕು ಎಂಬ ಬೇಡಿಕೆ ವಿದ್ಯಾರ್ಥಿಗಳದ್ದಾಗಿದೆ. ಕೇಂದ್ರ ಸರ್ಕಾರವು ಸಮಸ್ಯೆಗಳನ್ನು ಬಗೆಹರಿಸುವ ಬದಲಿಗೆ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಿದೆ. ಅತ್ಯಂತ ಕ್ರೂರವಾಗಿ ನಡೆದುಕೊಂಡಿದೆ. ಇದು ನಾಗರಿಕ ಸಮಾಜವನ್ನು ಬೆದರಿಸುವುದು ಮತ್ತು ಹಿಮ್ಮೆಟ್ಟಿಸುವುದಾಗಿದೆ ಎಂದು ಟೀಕಿಸಿದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿನ ಎಲ್ಲ ಅಕ್ರಮಗಳನ್ನು ಬಯಲಿಗೆಳೆದು ಎಲ್ಲ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ನೀಟ್ ಪರೀಕ್ಷೆಯ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಿರುವುದನ್ನು ರದ್ದುಗೊಳಿಸಬೇಕು. ಎನ್‌ಟಿಎ ಮತ್ತು ಎನ್‌ಇಪಿ ಕೂಡಲೆ ರದ್ದುಗೊಳಿಸಬೇಕು. ಶಿಕ್ಷಣದ ಖಾಸಗೀಕರಣ ನಿಲ್ಲಿಸಬೇಕು. ಶಿಕ್ಷಣವು ಸಾರ್ವಜನಿಕ ಹಕ್ಕಾದ್ದರಿಂದ ಉಚಿತವಾಗಿ ದೊರೆಯುವಂತೆ ಕ್ರಮ ವಹಿಸಬೇಕು. ಆತ್ಮಹತ್ಯೆ ಮಾಡಿಕೊಂಡ ಇಪ್ಪತ್ತೆರಡು ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 1 ಕೋಟಿ ಪರಿಹಾರ ಧನ ಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಚಿಂತಕ ಪ್ರೊ.ಆರ್.ಕೆ ಹುಡಗಿ, ಮಹಿಳಾ ಹೋರಾಟಗಾರ್ತಿಯರಾದ ಕೆ. ನೀಲಾ, ಮೀನಾಕ್ಷಿ ಬಾಳಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಆರ್.ಜಿ ಶೆಟಗಾರ್, ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷ ಶಿವಶರಣಪ್ಪ ಮೂಳೆಗಾಂವ್, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಅಧ್ಯಕ್ಷೆ ಪದ್ಮಿನಿ ಕಿರಣಗಿ, ರೈತ ಮುಖಂಡರಾದ ಮೌಲಾ ಮುಲ್ಲಾ, ಶರಣಬಸಪ್ಪ ಮಮಶೆಟ್ಟಿ, ಮಂಜುಳಾ ಭಜಂತ್ರಿ, ಎಐಟಿಯುಸಿ ಕಾರ್ಮಿಕ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎಸ್.ಎಂ ಶರ್ಮಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ್ ಭದ್ರೆ, ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ಎಐಎಂಎಸ್‌ಎಸ್ ಜಿಲ್ಲಾ ಅಧ್ಯಕ್ಷೆ ಗುಂಡಮ್ಮ ಮಡಿವಾಳ, ಎಐಎಡಬ್ಲು ಮಹಿಳಾ ಸಂಘಟನೆ ಜಿಲ್ಲಾ ಅಧ್ಯಕ್ಷೆ ಪದ್ಮಾವತಿ ಮಾಲಿಪಾಟೀಲ, ಡಿವೈಎಫ್‌ಐ ರಾಜ್ಯ ಅಧ್ಯಕ್ಷೆ ಲವಿತ್ರ ವಸ್ತ್ರದ, ಎಐಡಿವೈಒ ಜಿಲ್ಲಾ ಅಧ್ಯಕ್ಷ ಜಗನ್ನಾಥ ಎಚ್‌.ಎಸ್, ಮೆಡಿಕಲ್ ಸರ್ವಿಸ್ ಸೆಂಟರ್ ಜಿಲ್ಲಾ ಅಧ್ಯಕ್ಷೆ ಡಾ.ಸೀಮಾ ದೇಶಪಾಂಡೆ, ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷ ತುಳಜರಾಮ್ ಎನ್.ಕೆ, ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಸರ್ವೇಶ್, ಫಾತಿಮಾ ಶೇಖ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *