ಸುದ್ದಿ ಸಂಗ್ರಹ ಚಿತ್ತಾಪುರ
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಪಟ್ಟಣದಲ್ಲಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಮೀಜಾ ಅಬ್ದುಲ್ ಹುಸೇನ್ ಶೇಖ್ (24) ಆತ್ಮಹತ್ಯೆಗೆ ಶರಣಾದವರು. ರಮೀಜಾ ಪತಿ ಅಬ್ದುಲ್ ಹುಸೇನ್ ಶೇಖ್, ಅತ್ತೆ ಸಾಹೇರಾ ಬಾನು, ಅಜ್ಜಿ ಹಫೀಜಾ, ಪತಿಯ ಅಣ್ಣನ ಪತ್ನಿ ನಿಶಾದ್ ಅಬ್ದುಲ್ ಗಫೂರ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಬ್ದುಲ್ ಶೇಖ್ನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ವಿವರ: 5 ರ್ಷಗಳ ಹಿಂದೆ ಅಬ್ದುಲ್ ಜೊತೆ ರಮೀಜಾ ಮದುವೆಯಾಗಿತ್ತು. ವರದಕ್ಷಿಣೆಯಾಗಿ 50 ಗ್ರಾಂ ಬಂಗಾರ, 1 ಲಕ್ಷ ನಗದು ನೀಡಲಾಗಿತ್ತು. ಮದುವೆಯಾದ ಕೆಲ ತಿಂಗಳು ನಂತರ ಅಬ್ದುಲ್ ಮನೆಯವರು ಕಿರುಕುಳ ಶುರು ಮಾಡಿದ್ದರು. ಮೂರು ವರ್ಷಗಳಿಂದ ಮನೆಯಲ್ಲಿ ಯಾವುದೆ ಕಾರ್ಯಕ್ರಮಗಳಿದ್ದರೂ ಮಗಳನ್ನು ನಮ್ಮ ಮನೆಗೆ ಕಳಿಸಿಲ್ಲ ಎಂದು ರಮೀಜಾ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವರದಕ್ಷಿಣೆ ಕಿರುಕುಳ ತಾಳದೇ ಜು.2ರಂದು ರಮೀಜಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಜು.3ರಂದು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಮೀಜಾ–ಅಬ್ದುಲ್ ಹುಸೇನ್ ದಂಪತಿಗೆ ಮೂರೂವರೆ ವರ್ಷದ ಮಗು ಇದೆ.