ಕಲಬುರಗಿ: ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮನವಿ

ಜಿಲ್ಲೆ

ಸುದ್ದಿ ಸಂಗ್ರಹ ಕಲಬುರಗಿ
2026–27ನೇ ಸಾಲಿನ ಶೈಕ್ಷಣಿಕ ವರ್ಷವು ಜೂನ್ 1ರಿಂದ ಆರಂಭವಾಗುತ್ತಿದ್ದು, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಆಯೋಜಿಸಲಾಗುತ್ತಿದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ಸಂಕನೂರ್‌ ಪಾಲಕ–ಪೋಷಕರಲ್ಲಿ ಮನವಿ ಮಾಡಿದ್ದಾರೆ.

ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಪಾಲಕ–ಪೋಷಕರಿಗೆ ಬಹಿರಂಗ ಪತ್ರ ಬರೆದಿರುವ ಅವರು, ಗುಣಮಟ್ಟದ ಶಿಕ್ಷಣವು ಪ್ರತಿ ಮಗುವಿನ ಮೂಲಭೂತ ಹಕ್ಕಾಗಿದ್ದು, ಅದನ್ನು ಈಡೇರಿಸುವ ಮತ್ತು ಸಮೃದ್ಧ ಸಮಾಜ ನಿರ್ಮಾಣದ ಭದ್ರ ಅಡಿಪಾಯ ಹಾಕುವ ಜವಾಬ್ದಾರಿ ಪಾಲಕರ ಮೇಲಿದೆ. ಶಾಲೆ ಮತ್ತು ಸಮುದಾಯಗಳು ಒಂದೆ ಗುರಿಯೊಂದಿಗೆ ಕೈಜೋಡಿಸಿದಾಗ ಮಕ್ಕಳ ಭವಿಷ್ಯ ಮತ್ತಷ್ಟು ಉಜ್ವಲವಾಗುತ್ತದೆ ಎಂದು ಹೇಳಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಅರ್ಹ ಮತ್ತು ಬದ್ಧತೆಯುಳ್ಳ ಶಿಕ್ಷಕರು, ಉಚಿತ ಪಠ್ಯಪುಸ್ತಕಗಳು ಮತ್ತು ಸಮವಸ್ತ್ರಗಳು, ಪೌಷ್ಟಿಕ ಬಿಸಿಯೂಟ ಯೋಜನೆ, ಸುರಕ್ಷಿತ ಮೂಲಸೌಕರ್ಯ, ಪ್ರೋತ್ಸಾಹ ಧನ ಮತ್ತು ವಿದ್ಯಾರ್ಥಿ ವೇತನ, ಸಮಗ್ರ ವ್ಯಕ್ತಿತ್ವ ವಿಕಸನ, ಗ್ರಂಥಾಲಯ, ಪ್ರಯೋಗಾಲಯ, ತಾಂತ್ರಿಕ ಶಿಕ್ಷಣ, ಡಿಜಿಟಲ್ ಕಲಿಕಾ ಹೀಗೆ ಅನೇಕ ಸೌಲಭ್ಯಗಳು ಇವೆ ಎಂದು ತಿಳಿಸಿದ್ದಾರೆ.

ಪಾಲಕರ ಮಹಾಸಭೆಗೆ ಬನ್ನಿ: ಜೂನ್ 1ರಂದು ಜಿಲ್ಲೆಯ ಪ್ರತಿ ಸರ್ಕಾರಿ ಶಾಲೆಯಲ್ಲಿ ಪಾಲಕರ ಮಹಾಸಭೆ ಆಯೋಜಿಸಲಾಗಿದ್ದು, ತಪ್ಪದೆ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *