ಸುದ್ದಿ ಸಂಗ್ರಹ ಕಾಳಗಿ
ಸುತ್ತಲಿನ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ‘ಡಯಾಲಿಸಿಸ್ ಸೇವಾ ಘಟಕ’ ಆರಂಭಿಸುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಇಟ್ಟಿದೆ’ ಎಂದು ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಹೇಳಿದರು.
ಈಚೆಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಸೇವಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಚಿಂಚೋಳಿ, ಚಿತ್ತಾಪುರ, ಕಮಲಾಪುರ ಮತ್ತು ಸೇಡಂ ತಾಲೂಕಿಗೆ ಹೊಂದಿಕೊಂಡಿರುವ ಕಾಳಗಿ ಪ್ರಸ್ತುತ 30 ಹಾಸಿಗೆಯ ಸಿಎಚ್‌ಸಿ ಆಸ್ಪತ್ರೆ ಹೊಂದಿದೆ. ಆದರೆ ಬೇರೆ ತಾಲೂಕಿಗಿಂತ ಇಲ್ಲಿ ರೋಗಿಗಳ ಸಂಖ್ಯೆ ಅಧಿಕವಾಗಿದೆ ಎಂದರು.
ಆಸ್ಪತ್ರೆ ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಮೇಲ್ಮಹಡಿಯಲ್ಲಿ ಇನ್ನೂ 20 ಹಾಸಿಗೆಯ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಜನತೆಗೆ ಈ ಮೊದಲು ಸಿಜೆರಿಯನ್ ಹೆರಿಗೆಯ ಸೇವೆ ಪ್ರಾರಂಭಿಸಲಾಗಿದೆ ಎಂದರು.
ವೈದ್ಯರು ಸೇರಿದಂತೆ ಇತರ ಸಿಬ್ಬಂದಿಯ ಖಾಲಿ ಹುದ್ದೆ ಭರ್ತಿಗೆ ಕ್ರಮೇಣ ವ್ಯವಸ್ಥೆ ಮಾಡಲಾಗುವುದು. ವಸತಿಗೃಹ ದುರಸ್ತಿ, ಸಂಪರ್ಕ ರಸ್ತೆ ಇತರ ಸೌಲಭ್ಯ ಕಲ್ಪಿಸಿಕೊಟ್ಟು ರೋಗಿಗಳ ಸೇವೆಗಾಗಿ ಆಸ್ಪತ್ರೆ ಸಿಬ್ಬಂದಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಇದೆ ವೇಳೆ 20 ಹಾಸಿಗೆಯ ಕಟ್ಟಡ ಕಾಮಗಾರಿ, ಸಿಸಿ ರಸ್ತೆ ನಿರ್ಮಾಣಕ್ಕಾಗಿ ಸ್ಥಳ ಪರಿಶೀಲನೆ ಮಾಡಿದ ಅವರು, ಆಸ್ಪತ್ರೆ ಸ್ಥಳದ ವಿವಾದಕ್ಕೆ ಸಂಬಂಧಪಟ್ಟಂತೆ ನಿಗಾವಹಿಸಿ ಅಗತ್ಯಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್‌ಗೆ ಸೂಚಿಸಿದರು. ಆಡಳಿತ ವೈದ್ಯಾಧಿಕಾರಿ ಡಾ.ಅಮರೇಶ ಎಂ.ಎಚ್ ಅವರು ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರನ್ನು ಕೋರಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪೃಥ್ವಿರಾಜ ಪಾಟೀಲ, ತಾ.ಪಂ ಇಒ ಬಸಲಿಂಗಪ್ಪ ಡಿಗ್ಗಿ, ಡಿಎಸ್ಒ ಡಾ.ರಾಕೇಶ ಕಾಂಬಳೆ, ಚಿತ್ತಾಪುರ ಟಿಎಚ್ಒ ಡಾ.ವೀರನಾಥ ಕನಕ, ಪಟ್ಟಣ ಪಂಚಾಯಿತಿ ಸದಸ್ಯರಾದ ರಮೇಶ ಕಿಟ್ಟದ, ಜೀತೇಂದ್ರ ರಾಠೋಡ, ಮಾಜಿ ಸದಸ್ಯ ಪ್ರಶಾಂತ ಕದಂ, ಶೇಖರ ಪಾಟೀಲ, ಚಂದ್ರಕಾಂತ ಚವಾಣ, ವೆಂಕಟೇಶ ರಾಠೋಡ, ಶರಣು ಚಂದಾ, ಶಿವಕುಮಾರ ಕಮಕನೂರ ಸೇರಿದಂತೆ ಅನೇಕರು ಇದ್ದರು.