ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪ್ರಕರಣ ಹಿಂಪಡೆಯಲು ಆಗ್ರಹ‌‌

ಪಟ್ಟಣದ

ಸುದ್ದಿ ಸಂಗ್ರಹ ಚಿತ್ತಾಪುರ
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಹಲರೋಜಾದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಸುಳ್ಳು ಪೋಕ್ಸೊ ಪ್ರಕರಣ ದಾಖಲಿಸಿದ್ದು, ಸರ್ಕಾರ ಅದನ್ನು ಹಿಂಪಡೆದು ರದ್ದುಪಡಿಸಬೇಕು ಎಂದು ತಾಲೂಕು ಕೋಲಿ ಸಮಾಜದ ಪದಾಧಿಕಾರಿಗಳು ಮತ್ತು ಮುಖಂಡರು ಆಗ್ರಹಿಸಿದ್ದಾರೆ.

ಸಮಾಜದ ಅಧ್ಯಕ್ಷ ನಿಂಗಣ್ಣಾ ಹೆಗಲೇರಿ ನೇತೃತ್ವದಲ್ಲಿ ಶುಕ್ರವಾರ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್‌ಗೆ ಸಲ್ಲಿಸಿ, ನಂತರ ಮಾತನಾಡಿದ ಅವರು, ಬಾಲಕಿಯ ಹೇಳಿಕೆ, ಪಾಲಕರ ದೂರು ಇಲ್ಲದೆ ಸ್ಥಳೀಯ ನ್ಯಾಯಾಧೀಶರ ಮುಂದೆ ಬಾಲಕಿಯ ಹೇಳಿಕೆ ದಾಖಲಿಸಿಕೊಳ್ಳದೆ ಪ್ರಕರಣ ದಾಖಲಿಸಿ ಪೋಕ್ಸೊ ಕಾನೂನು ಉಲ್ಲಂಘಿಸಲಾಗಿದೆ. ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿರುವ ಸಿಡಿಪಿಒ ಮತ್ತು ತರಾತುರಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಗೋಗಿ ಠಾಣೆ ಪಿಎಸ್‌ಐ ಅವರನ್ನು ಅಮಾನತುಗೊಳಿಸಬೇಕು ಎಂದರು.

ಮಲ್ಲಿಕಾರ್ಜುನ ಮುತ್ಯಾ ಸುಳ್ಳು ಪೋಕ್ಸೊ ಪ್ರಕರಣದಲ್ಲಿ ಸಿಲುಕುವಂತೆ ಮಾಡಿ, ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನು ತಕ್ಷಣದಿಂದ ತೆಗೆದು ಹಾಕಬೇಕು. ಅವರು ನಾಡಿನ ಜನತೆಗೆ, ಮಠದ ಭಕ್ತರಿಗೆ, ಬಾಲಕಿಯ
ಕುಟುಂಬಕ್ಕೆ ಬೇಷರತ್ ಕ್ಷಮೆ ಕೋರುವಂತೆ ಸರ್ಕಾರ ಸೂಚಿಸಬೇಕು. ಪ್ರಕರಣ ಹಿಂಪಡೆಯದಿದ್ದರೆ ಯಾದಗಿರಿ ಚಲೋ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರಾಮಲಿಂಗ ಬಾನರ್, ಸುರೇಶ ಬೆನಕನಳ್ಳಿ, ಮಲ್ಲಿಕಾರ್ಜುನ ಎಮ್ಮೆನೋರ್, ಹಣಮಂತ ಸಂಕನೂರು, ದೇವಿಂದ್ರ ಅರಣಕಲ್, ಭೀಮಣ್ಣಾ ಹೋತಿನಮಡು, ದತ್ತು ಮೈನಾಳಕರ್, ನಾಗರಾಜ ಜೈಗಂಗಾ, ಕರಣಕುಮಾರ ಅಲ್ಲೂರ, ಪ್ರಭು ಹಲಕರ್ಟಿ, ರಾಜೇಶ ಹೋಳಿಕಟ್ಟಿ, ಮಹಿಪಾಲ್ ಮೂಲಿಮನಿ, ಮಲ್ಲಿಕಾರ್ಜುನ ಅಲ್ಲೂರ್, ಭಾಗಣ್ಣಾ ಹಲಕರ್ಟಿ, ದಶರಥ ದೊಡ್ಡಮನಿ,
ರಾಜಾ ಹುಲಿ ಇದ್ದರು.

Leave a Reply

Your email address will not be published. Required fields are marked *