ಸುದ್ದಿ ಸಂಗ್ರಹ

ವಿದ್ಯಾರ್ಥಿಗಳು ನೈತಿಕ ಕರ್ತವ್ಯವನ್ನು ಪಾಲಿಸಬೇಕು

ಸುದ್ದಿ ಸಂಗ್ರಹ ಶಹಾಬಾದ್

ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ ವಿದ್ಯಾರ್ಥಿಗಳು ನೈತಿಕ ಕರ್ತವ್ಯ ಪಾಲಿಸುವದಾಗಿದ್ದು, ವಿದ್ಯಾರ್ಥಿ ಜೀವನದ ನಂತರವೂ ಚಾಚು ತಪ್ಪದೆ ಪಾಲಿಸಬೇಕು ಎಂದು ಶಹಾಬಾದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪರಮೇಶ್ವರ ಹೇಳಿದರು.

ನಗರದ ಹೈ.ಕ.ಶಿಕ್ಷಣ ಸಂಸ್ಥೆಯ ಎಸ್.ಎಸ್.ಮರಗೋಳ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತ, ಪ್ರತಿಯೊಬ್ಬರಿಗೆ ನೈತಿಕ ಕರ್ತವ್ಯಗಳು, ಶಾಸನಬದ್ದ ಕರ್ತವ್ಯಗಳು ಇರುತ್ತವೆ. ಶಾಸನಬದ್ದ ಕರ್ತವ್ಯಗಳನ್ನು ಶಾಸನದ ಭಯದಿಂದ ನಿರ್ವಹಿಸುತ್ತೇವೆ, ಆದರೆ, ನೈತಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲರಾಗುತ್ತಿದ್ದೇವೆ, ನೈತಿಕ ಕರ್ತವ್ಯಗಳಾದ ತಂದೆತಾಯಿ, ಗುರುಹಿರಿಯರನ್ನು ಗೌರವಿಸುವದು, ಸಮಾಜ ಸೇವೆ, ದೇಶ ಸೇವೆ ಇವುಗಳನ್ನು ಮಾಡುವಲ್ಲಿ ವಿಫಲರಾಗುತ್ತಿದ್ದು, ಇದಕ್ಕೆ ಕಾರಣ ನಮ್ಮಲ್ಲಿ ನೈತಿಕ ಪ್ರಜ್ಞೆ ಕಡಿಮೆಯಾಗುತ್ತಿದೆ ಎಂದೇ ಅರ್ಥ, ಅದ್ದರಿಂದ ವಿದ್ಯಾರ್ಥಿಗಳು ಈ ಶಿಬಿರದ ಮೂಲಕ ನೈತಿಕ ಪ್ರಜ್ಞೆ ಬೆಳಸಿಕೊಂಡು, ನೈತಿಕ ಕರ್ತವ್ಯಗಳನ್ನು ಪಾಲಿಸಬೇಕೆಂದು ಕರೆ ನೀಡಿದರು.

ಪತ್ರಕರ್ತ ಕೆ.ರಮೇಶ ಭಟ್ಟ ಮಾತನಾಡಿ ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತ ಕರ್ತವ್ಯ ಪ್ರಜ್ಞೆ, ಸಮಾಜ ಸೇವೆಯನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ನಿಮ್ಮ ಕರ್ತವ್ಯ, ಸಮಾಜ ಸೇವೆಗೆ ಹಣ,ಅಂತಸ್ಥು, ಜಾತಿ,ಧರ್ಮ ಅಡ್ಡ ಬರದಂತೆ ಸಮಾಜ ಸೇವೆ ಮಾಡುವ ಮೂಲಕ ದೇಶದ ಅಭಿವೃದ್ದಿಗೆ ಕೈ ಜೋಡಿಸಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಬಸವರಾಜ ಹಿರೇಮಠ ಮಾತನಾಡಿ, ಕಳೆದ ಒಂದು ವಾರದಿಂದ “ನನ್ನ ಬಾರತಕ್ಕಾಗಿ ಯುವಕರು, ಮತ್ತು ಡಿಜಿಟಲ್ ಸಾಕ್ಷರತೆಗಾಗಿ ಯುವಕರು” ಘೋಷ ವಾಕ್ಯದೊಂದಿಗೆ ನಡೆದ ಶಿಬಿರದಲ್ಲಿ ಡಿಜಿಟಲ್ ಸಾಕ್ಷರತೆ, ಸಮಾಜ ಸೇವೆ, ಸೇವಾ ಮನೋಭಾವೆಯ ಕುರಿತು ಒಳ್ಳೆ ಮಾಹಿತಿ ಪಡೆದಿದ್ದಿರಿ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜ ಸೇವೆ, ದೇಶ ಸೇವೆ ಮಾಡಬೇಕೆಂದು ಸಲಹೆ ನೀಡಿದರು.

ಪತ್ರಕರ್ತರಾದ ಕೆ.ರಮೇಶ ಭಟ್ಟ, ಖಾಜಾ ಪಟೇಲ ಮಾತನಾಡಿದರು, ವಿದ್ಯಾರ್ಥಿಗಳಾದ ಅಜಯ, ಕುಸುಮ್ ಶಿಬಿರ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆ ಮೇಲೆ ಪತ್ರಕರ್ತರಾದ ಲೋಹಿತ ಕಟ್ಟಿ, ಅನೀಲ ಮೈನಾಳಕರ್, ರಾ.ಸೇ.ಯೋ ಘಟಕ ಎ ಅಧಿಕಾರಿ ಡಾ.ಲಕ್ಸö್ಮಣ ಟಿ. ಉಪಸ್ಥಿತರಿದ್ದರು.

ಶಿಬಿರದಲ್ಲಿ ಒಳ್ಳೆ ಕರ್ತವ್ಯ ನಿರ್ವಹಿಸಿದ ಕಾವೇರಿ ತಂಡಕ್ಕೆ ಪ್ರಥಮ, ಕಾಗಿಣಾ, ಕೃಷ್ಣಾ ದ್ವಿತೀಯ, ತುಂಗಭದ್ರಾ ತಂಡಕ್ಕೆ ತೃತೀಯ ಬಹುಮಾನವನ್ನು, ಉತ್ತಮ ಶಿಬಿರಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.

ಶಿವಶಂಕರ ಹಿರೇಮಠ ಪ್ರಾರ್ಥಿಸಿದರು. ಡಾ. ಸುರೇಖ ವರದಿ ವಾಚನ ಮಾಡಿದರು. ಶಿವುಕುಮಾರ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಕಾಲೇಜಿನ ಭೋಧಕ, ಭೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *