ಸುದ್ದಿ ಸಂಗ್ರಹ ಮೈಸೂರು
ಜಂಟಿ ಪ್ರವೇಶ ಪರೀಕ್ಷೆ(ಜೆಇಇ) ಬಿ.ಆರ್ಕ್, ಬಿ ಪ್ಲಾನಿಂಗ್ ಫೇಸ್ 1ರಲ್ಲಿ ಮಗ ದೇಶಕ್ಕೆ ಟಾಪರ್ ಆದ ಖುಷಿಯಲ್ಲಿ ತಾಯಿ ಶಾಲಾ ಮಕ್ಕಳಿಗೆ ಊಟ ಹಾಕಿಸಿ ಸಂಭ್ರಮಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಮಲೆಯೂರು ಗ್ರಾಮದ ನಿವಾಸಿಗಳಾಗಿರುವ ಎ.ಸಿ ನೇತ್ರಾವತಿ ಮತ್ತು ಎಂ.ಡಿ ಗುರುಸ್ವಾಮಿ ದಂಪತಿಯ ಪುತ್ರ ಎಂ.ಜಿ ನಾಗದೇವ 2026ರ ಜೆಇಇ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಕೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಂಜನಗೂಡು ತಾಲೂಕಿನ ಸುತ್ತೂರು ಜೆಎಸ್ಎಸ್ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿರುವ ತಾಯಿ, ಸುತ್ತೂರಿನ ವಸತಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ 1ರಿಂದ 10ನೇ ತರಗತಿಯ ಸುಮಾರು 4,000 ವಿದ್ಯಾರ್ಥಿಗಳಿಗೆ ಸೋಮವಾರ ಊಟ ಹಾಕಿಸಿದರು. ವಿದ್ಯಾರ್ಥಿಗಳೊಂದಿಗೆ ಅಲ್ಲಿನ ಸಿಬ್ಬಂದಿಗೂ ಪಾಯಸ, ಹುಳಿ, ಮೊಸರನ್ನ ಹಾಗೂ ರೈಸ್ಬಾತ್ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ನಾಗದೇವ, ಜೆಇಇ-(ಮೇನ್)2026 ಪರೀಕ್ಷೆಯಲ್ಲಿ 99.9762 ಪ್ರತಿಶತ ಅಂಕ ಪಡೆದಿದ್ದಾರೆ. ಈ ಮೂಲಕ ಚಾಮರಾಜನಗರ ಜಿಲ್ಲೆ, ರಾಜ್ಯ, ಪೋಷಕರು ಹಾಗೂ ತಾನು ವ್ಯಾಸಂಗ ಮಾಡುತ್ತಿದ್ದ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
“ಮಗನ ಸಾಧನೆ ಇತರ ಮಕ್ಕಳಿಗೆ ಸ್ಫೂರ್ತಿಯಾಗಲಿ ಎಂದು ಸುತ್ತೂರು ಶಾಲೆಯ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳ ಊಟಕ್ಕೆ ನಮ್ಮ ಕೈಲಾದ ವ್ಯವಸ್ಥೆ ಮಾಡಿದ್ದೆವೆ. ನಾಗದೇವ ಸದ್ಯ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾನೆ. ಮುಂದೆ ಜೆಇಇ ಅಡ್ವಾನ್ಸ್ ಬರೆದು ಐಐಟಿಯಲ್ಲಿ ಓದುವ ಆಸೆ ಇದೆ” ಎಂದು ತಂದೆ ಗುರುಸ್ವಾಮಿ ತಿಳಿಸಿದ್ದಾರೆ.
ನಾಗದೇವ ಅವರ ತಾಯಿ ನೇತ್ರಾವತಿ ಸುತ್ತೂರು ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ತಂದೆ ಗುರುಸ್ವಾಮಿ ನಂಜನಗೂಡಿನ ಜೆಎಸ್ಎಸ್ ಪಾಲಿಟೆಕ್ನಿಕ್ನಲ್ಲಿ ಬೋಧಕರಾಗಿದ್ದಾರೆ.