ಸುದ್ದಿ ಸಂಗ್ರಹ ಕಾಳಗಿ
ಮನೆ ಮನೆಗೆ ಪೊಲೀಸ್ ಸೇವೆ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಜನರ ಸಮಸ್ಯೆಗಳು ತಾಳ್ಮೆಯಿಂದ ಆಲಿಸಿ ಸ್ಪಂದಿಸಲು ಪೊಲೀಸರಿಗೆ ನೆರವಾಗಲಿದೆ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಕಾಳಗಿ ಪೊಲೀಸ್ ಠಾಣೆಯಿಂದ ಮಂಗಳವಾರ ಏರ್ಪಡಿಸಿದ್ದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸ್ನೇಹಿ ಪೊಲೀಸ್ ವ್ಯವಸ್ಥೆಯಿಂದ ಜನರಲ್ಲಿ ಸುರಕ್ಷತಾ ಭಾವ ಸೃಷ್ಟಿಯಾಗುತ್ತದೆ ಎಂದರು.
ಸಿಪಿಐ ಜಗದೇವಪ್ಪ ಪಾಳಾ ಮಾತನಾಡಿ, ಪೊಲೀಸರು ಮನೆಗೆ ಬರುವುದು, ಜನರು ಪೊಲೀಸ್ ಠಾಣೆಗೆ ಹೋಗುವುದು ಯಾರು ಆಪೇಕ್ಷಿಸುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿ ಮತ್ತು ಆಡಳಿತ ಸ್ನೇಹಿಯಾಗಿಸಲು ಇಲಾಖೆ ಮುಂದಾಗಿದೆ. ಪೊಲೀಸ್ ವ್ಯವಸ್ಥೆ ಬಗ್ಗೆ ಜನರಲ್ಲಿರುವ ಆತಂಕ ದೂರು ಮಾಡಲು ಸ್ಥಳೀಯ ಪೊಲೀಸ್ ಸಿಬ್ಬಂದಿ ಮನೆ ಮನೆಗೆ ಬಂದು ಜನರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.
ಈ ಕಾರ್ಯಕ್ರಮದ ಮೂಲಕ ಕೆಲವು ಮನೆಗಳ ಸಮೂಹ ರಚಿಸಿ, ಪ್ರತಿ ಬೀಟ್ ಪೊಲೀಸ್ಗೆ ಆಯಾ ಜವಾಬ್ದಾರಿ ನೀಡಿ, ಸಾರ್ವಜನಿಕರೊಂದಿಗೆ ಸಂವಾದ ಮಾಡಲಾಗುತ್ತದೆ. ಓಣಿಗೆ ಪೊಲೀಸರು ಬಂದು ಮಾತನಾಡುತ್ತಾರೆ. ಸಮಸ್ಯೆಗಳಿದ್ದರೆ ಠಾಣಾ ವ್ಯಾಪ್ತಿ, ಉಪವಿಭಾಗ ಹೀಗೆ ವಿವಿಧ ಹಂತಗಳಲ್ಲಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕಾಳಗಿ ಪಿಎಸ್ಐ ತಿಮ್ಮಯ್ಯ ಬಿ.ಕೆ ಮಾತನಾಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗಳಾದ ಬಸಪ್ಪ, ಮೌನೇಶ್, ಸಂಗಮೇಶ, ಗ್ರಾಮದ ಮುಖಂಡರಾದ ಶರಣಪ್ಪ ತೆಲಗಾಣಿ, ಶರಣಗೌಡ ಪೊ. ಪಾಟೀಲ, ಮಂಜುನಾಥ ಭೇರನ, ಜಾವೇದ್ ಆಫಖಾನ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಇದ್ದರು.