ನಾಡಿನ ಇತಿಹಾಸದ ಪುಟ ತರೆಯುವ ತಡಕಲ್ ಜೈನ ಬಸದಿ: ಮುಡುಬಿ ಗುಂಡೇರಾವ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಲಬುರಗಿ
ತಡಕಲ್ ಗ್ರಾಮದ ಜೈನ ಬಸದಿಯು ನಾಡಿನ ಇತಿಹಾಸದ ಪುಟ ತೆರೆಯುತ್ತವೆ. ನಮ್ಮ ನೆಲವೆ ನಮಗೆ ಪ್ರೇರಣೆ. ಜೈನರ ಕಾವ್ಯ, ಶರಣರ ವಚನ, ದಾಸರ ವಾಣಿ ಮೊಳಗಿದ ಪುಣ್ಯ ಭೂಮಿ ಆಳಂದ ಸಾಸಿರ ನಾಡಿನ ಕೊಡುಗೆ ಅಪಾರ ಎಂದು ಸಂಶೋಧಕ ಮುಡುಬಿ ಗುಂಡೇರಾವ ಅಭಿಮತ ವ್ಯಕ್ತಪಡಿಸಿದರು.

ಜಿಲ್ಲೆಯ ತಡಕಲ್ ಗ್ರಾಮದ ಜೈನ ಶಾಂತಿನಾಥ ಬಸದಿಯಲ್ಲಿ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳ ಪರಿಚಯಾತ್ಮಕ -49 ಸರಣಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು ಆಳಿದ ಕಲಬುರಗಿ ಮತ್ತು ಆಳಂದ ಸಾಸಿರ ನಾಡಿನಲ್ಲಿ ಅನೇಕ ಜೈನ ಬಸದಿಗಳು ತುಂಬಾ ಕಲಾತ್ಮಕವಾಗಿವೆ, ತಡಕಲ್ ಗ್ರಾಮದಲ್ಲಿನ ಜೈನ ಶಾಂತಿನಾಥ ಬಸದಿಯು ತುಂಬಾ ಕಲಾತ್ಮಕವಾಗಿದೆ, ಶಾಂತಿನಾತ, ಆದಿ ತೀರ್ತಂಕರ, ಮಹಾವೀರ ಮೂರ್ತಿ, ಸರಸ್ವತಿ, ಪದ್ಮಾವತಿ ಶಿಲ್ಪಗಳು ತುಂಬಾ ಆಕರ್ಶಕ, ತ್ಯಾಗ ಪ್ರಸನ್ನತೆ ಮತ್ತು ಭಕ್ತಿಯ ಸಂಕೇತವಾಗಿದೆ, ತಡಕಲ್ ಗ್ರಾಮದಲ್ಲಿ ದೊರೆತಿರುವ ಎರಡು ಶಿಲಾಶಾಸನಗಳು ನಮ್ಮ ನೆಲದ ಇತಿಹಾಸವನ್ನು ಸಾರುತ್ತವೆ. ಕುಂತಲ ನಾಡಿಗೆ ಸೇರಿದ ಆಳಂದ ಸಾಸಿರ ನಾಡಿನ ಇತಿಹಾಸವು ತುಂಬಾ ರೋಚಕವಾಗಿದೆ. ಕಲ್ಯಾಣ ಚಾಲುಕ್ಯರ 6ನೇ ವಿಕ್ರಾಮಾದಿತ್ಯನ ರಾಣಿಯು ಆಳಂದ ಸಾಸಿರ ನಾಡಿಗೆ ಆಡಳಿತಾಧಿಕರಿಯಾಗಿ ಕಾರ್ಯನಿರ್ವಹಸಿದ್ದು ಶಾಸನಗಳಿಂದ ತಿಳಿದು ಬರುತ್ತದೆ. ಚಾಲುಕ್ಯರು ಕಟ್ಟಿಸಿದ ಶಿವ, ವಿಷ್ಣು, ಜೈನ ಸೇರಿದಂತೆ ಮುಂತಾದ ದೇವಾಲಯಗಳು ಕನ್ನಡ ಸಂಸ್ಕೃತಿ ಬೆಳಸಿವೆ. ಕಲೆ, ಸಾಹಿತ್ಯ, ಸಂಗೀತ, ನೃತ್ಯ ಮುಂತಾದ ಕ್ಷೇತ್ರಗಳಿಗೆ ದೇವಾಲಯಗಳು ಕೇಂದ್ರ ಸ್ಥಾನಗಳಾಗಿದ್ದವು ಎಂದರು.

ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ ಮಾತನಾಡಿ, ಐತಿಹಾಸಿಕ ಸ್ಮಾರಕಗಳ ರಕ್ಷಣೆಯಿಂದ ಕನ್ನಡ ನಾಡು ನುಡಿ ರಕ್ಷಣೆ ಸಾಧ್ಯ, ಈ ನಿಟ್ಟಿನಲ್ಲಿ ನಮ್ಮ ಬಳಗದ ವತಿಯಿಂದ ಕಳೆದ ಒಂದುವರೆ ವರ್ಷದಿಂದ ಐತಿಹಾಸಿಕ ಜಾಗೃತಿ ಅಭಿಯಾನ ನಡೆಸಲಾಗುತ್ತದೆ. ಇತಿಹಾಸದ ಅರಿವು ಪ್ರತಿಯೊಬ್ಬರಿಗೂ ಅಗತ್ಯ ಎಂದರು.

ಕಾಳಗಿ ತಾಲೂಕು ಕಸಾಪ ಅಧ್ಯಕ್ಷ ಸಂತೋಷ ಕಡ್ಡಳ್ಳಿ ಮಾತನಾಡಿ, ಜಿಲ್ಲೆಯ ಪ್ರತಿ ಗ್ರಾಮವು ತನ್ನದೆಯಾದ ಇತಿಹಾಸ ಹೊಂದಿದೆ, ಇಂದಿನ ಪೀಳಿಗೆಗೆ ನಮ್ಮ ನೆಲದ ಹಿರಿಮೆ ಗರಿಮೆ ತಿಳಿಸುವ ಕಾರ್ಯವು ಬಳಗದ ವತಿಯಿಂದ ಯಶಸ್ವಿಯಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಆಳಂದ ಸಾಸಿರ ನಾಡಿನ ಇತಿಹಾಸ ತುಂಬಾ ರೋಚಕವಾಗಿದೆ. ಕುಂತಲ ನಾಡಿಗೆ ಸೇರಿದ ಆಳಂದ ಸಾಸಿರ ನಾಡಿನ ಪ್ರತಿ ಗ್ರಾಮವು ಕನ್ನಡ ನುಡಿ ಸಂಸ್ಕೃತಿಯನ್ನು ಸಾರುತ್ತವೆ. ತಡಕಲ್ ಗ್ರಾಮದ ಜೈನ ಬಸದಿಯು ನಾಡಿನ ಇತಿಹಾಸದ ಪುಟ ತೆರೆಯುತ್ತದೆ. ಜೈನರ ಕಾವ್ಯ, ಶರಣರ ವಚನ, ದಾಸರ ವಾಣಿಗೆ ನೀಡಿದ ನೆಲ ನಮ್ಮ ಹೆಮ್ಮೆಯ ಊರುಗಳು. ಹೆಜ್ಜೆ ಹೆಜ್ಜೆಗೂ ದೊರೆಯುವ ಸ್ಮಾರಕಗಳು ಕನ್ನಡಿಗರ ಹಿರಿಮೆ ಗರಿಮೆ ಸಾರುತ್ತವೆ.

ಮುಡುಬಿ ಗುಂಡೇರಾವ
ಸಂಶೋಧಕ- ಸಾಹಿತಿಗಳು

ಈ ಸಂದರ್ಭದಲ್ಲಿ ಸಮಾಜ ಸೇವಕ ಶಿವಯೋಗಪ್ಪ ಬಿರಾದಾರ, ಪ್ರಮುಖರಾದ ಶಾಂತಿನಾಥ ಎಸ್ ಪಂಡಿತ, ಸೋಮಶೇಖರ ಸ್ವಾಮಿ, ಮಲ್ಲಿಕಾರ್ಜುನ, ಭರತೇಶ ಪಾಟೀಲ, ಸುಂದರಲಾಲ ಪಾಟೀಲ, ರತ್ನಪ್ಪ ಪಾಟೀಲ, ಅರವಿಂದ ಹುಂಡೆಕಾರ, ದೀಪಿಕಾ ಪಂಡಿತ, ವಿಜಯಲಕ್ಷ್ಮಿ ಪಂಡಿತ, ಸುನಿಲಕುಮಾರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *