ಹೃದಯಾಘಾತದಿಂದ ಪುತ್ರ ನಿಧನ, ನೋವಿನಲ್ಲಿ 20 ಸಾವಿರ ಕೋಟಿ ರೂ ಆಸ್ತಿ ದಾನ ಮಾಡುವುದಾಗಿ ಉದ್ಯಮಿ ಶಪಥ

ನವದೆಹಲಿ

ಸುದ್ದಿ ಸಂಗ್ರಹ ನವದೆಹಲಿ
ವೇದಾಂತ ರಿಸೋರ್ಸಸ್ ಲಿಮಿಟೆಡ್‌ನ ಅಧ್ಯಕ್ಷ ಅನೀಲ್ ಅಗರ್ವಾಲ್ ಅವರು ತಮ್ಮ ಜೀವನದ ಅತ್ಯಂತ ಕಠಿಣ ಸಮಯದಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.

ಅಮೆರಿಕದಲ್ಲಿ ತಮ್ಮ ಮಗ ಅಗ್ನಿವೇಶ್ ಅಗರ್ವಾಲ್ ಅವರ ಅಕಾಲಿಕ ಮರಣದ ನಂತರ, ಅನೀಲ್ ಅಗರ್ವಾಲ್ ಅವರು ತಮ್ಮ ಒಟ್ಟು ಸಂಪತ್ತಿನ ಶೇ. 75ಕ್ಕಿಂತ ಹೆಚ್ಚಿನ ಪಾಲನ್ನು ಸಮಾಜ ಸೇವೆಗಾಗಿ ದಾನ ಮಾಡುವ ತಮ್ಮ ಹಳೆಯ ವಾಗ್ದಾನವನ್ನು ಪುನರುಚ್ಚರಿಸಿದ್ದಾರೆ.

ಫೋರ್ಬ್ಸ್‌ ಪ್ರಕಾರ ಅನೀಲ್‌ ಅಗರ್‌ವಾಲ್‌ 3 ಬಿಲಿಯನ್‌ ಡಾಲರ್‌ ಅಂದರೆ ಸುಮಾರು 27 ಸಾವಿರ ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಇದರಲ್ಲಿ ಸುಮಾರು 20 ಸಾವಿರ ಕೋಟಿ ರೂ.ಗಳನ್ನು ದಾನವಾಗಿ ನೀಡುವುದಾಗಿ ಹೇಳಿದ್ದಾರೆ.

ಅಗ್ನಿವೇಶ್ ಅಗರ್ವಾಲ್ ಅವರು ಅಮೇರಿಕಾದಲ್ಲಿ ಸೀಯಿಂಗ್ ಮಾಡುವಾಗ ಅಪಘಾತಕ್ಕೀಡಾಗಿದ್ದರು. ನ್ಯೂಯಾರ್ಕ್‌ನ ಮೌಂಟ್ ಸಿನಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದರು ಮತ್ತು ಅಪಾಯದಿಂದ ಪಾರಾಗಿದ್ದಾರೆ ಎಂದೆ ಭಾವಿಸಲಾಗಿತ್ತು. ಆದರೆ ವಿಧಿಯಾಟವೆ ಬೇರೆಯಾಗಿತ್ತು. ಚೇತರಿಕೆಯ ಹಾದಿಯಲ್ಲಿದ್ದ ಅಗ್ನಿವೇಶ್ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಭಾವುಕವಾಗಿ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ಅನೀಲ್ ಅಗರ್ವಾಲ್, “ಇದು ನನ್ನ ಜೀವನದ ಅತ್ಯಂತ ಕತ್ತಲ ದಿನ. ತಂದೆಯೊಬ್ಬ ತನ್ನ ಮಗನಿಗೆ ಅಂತಿಮ ವಿದಾಯ ಹೇಳುವ ನೋವನ್ನು ವಿವರಿಸಲು ಪದಗಳು ಸಾಲದು. ತಂದೆಗಿಂತ ಮುಂಚೆ ಮಗ ಹೋಗಬಾರದು, ಆದರೆ ಈ ನಷ್ಟ ನಮ್ಮನ್ನು ಜರ್ಝರಿತಗೊಳಿಸಿದೆ,” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮಗನ ಕನಸು ನನಸಾಗಿಸಲು ಪಣ
ಅಗ್ನಿವೇಶ್ ಅವರು ಸದಾ ಭಾರತದ ಅಭಿವೃದ್ಧಿಯ ಬಗ್ಗೆ ಕನಸು ಕಾಣುತ್ತಿದ್ದರು ಎಂದು ಅನೀಲ್ ಅಗರ್ವಾಲ್ ಸ್ಮರಿಸಿದ್ದಾರೆ. “ಭಾರತ ಯಾವುದರಲ್ಲೂ ಹಿಂದೆ ಬೀಳಬಾರದು, ನಮ್ಮ ದೇಶ ಸ್ವಾವಲಂಬಿಯಾಗಬೇಕು ಎಂಬುದು ಅಗ್ನಿವೇಶ್ ನಂಬಿಕೆಯಾಗಿತ್ತು. ಯಾವುದೆ ಮಗು ಹಸಿವಿನಿಂದ ಮಲಗಬಾರದು, ಶಿಕ್ಷಣದಿಂದ ವಂಚಿತರಾಗಬಾರದು ಮತ್ತು ಪ್ರತಿಯೊಬ್ಬ ಮಹಿಳೆಯೂ ಸ್ವಾವಲಂಬಿಯಾಗಿ ಬದುಕಬೇಕು ಎಂಬ ಕನಸನ್ನು ನಾವಿಬ್ಬರೂ ಹಂಚಿಕೊಂಡಿದ್ದೆವು,” ಎಂದು ಅಗರ್ವಾಲ್ ಸ್ಮರಿಸಿಕೊಂಡಿದ್ದಾರೆ.

ಈ ಕಾರಣಕ್ಕಾಗಿಯೆ, ತಾವು ಗಳಿಸಿದ ಸಂಪತ್ತಿನಲ್ಲಿ ಮುಕ್ಕಾಲು ಭಾಗ (ಶೇ. 75) ಸಮಾಜಕ್ಕೆ ಹಿಂತಿರುಗಿಸುವುದಾಗಿ ಈ ಹಿಂದೆ ಮಗನಿಗೆ ಮಾತು ಕೊಟ್ಟಿದ್ದೆ ಎಂದು ತಿಳಿಸಿದ್ದಾರೆ. ಈಗ ಮಗನ ಅಗಲಿಕೆಯ ನಂತರ ಆ ಮಾತಿಗೆ ತಾವು ಬದ್ಧರಾಗಿರುವುದಾಗಿ ಮತ್ತು ಇನ್ಮುಂದೆ ತಾವು ಇನ್ನೂ ಸರಳ ಜೀವನ ನಡೆಸುವುದಾಗಿ ಘೋಷಿಸಿದ್ದಾರೆ. ಮಗನ ನೆನಪು ಮತ್ತು ಆತ ಸಮಾಜದ ಮೇಲೆ ಬೀರಿದ ಪ್ರಭಾವ ಸದಾ ಜೀವಂತವಾಗಿರುತ್ತದೆ ಎಂದು ಹೇಳಿದ್ದಾರೆ.

ವೇದಾಂತ ಸಮೂಹದ ಮುಖ್ಯಸ್ಥರು ಈ ಹಿಂದೆಯೂ ಕೂಡ ತಮ್ಮ ಸಂಪತ್ತಿನ ಬಹುಪಾಲನ್ನು ಲೋಕೋಪಕಾರಕ್ಕೆ ನೀಡುವ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದರು, ಇದೀಗ ಪುತ್ರ ಶೋಕದ ನಡುವೆಯೂ ಆ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *