ಸುದ್ದಿ ಸಂಗ್ರಹ ಶಹಾಬಾದ
ದೇಶದ ಸ್ವಾತಂತ್ರ್ಯದ ನಂತರ ಮಹಾತ್ಮಾ ಗಾಂಧಿ ಚಿಂತನೆಯ ಸರ್ವೋದಯ, ಗ್ರಾಮ ಸ್ವರಾಜ್ ಕಲ್ಪನೆಯೇ ಇಂದು ರಾಷ್ಟ್ರೀಯ ಸೇವಾ ಯೋಜನೆಯಾಗಿದೆ ಎಂದು ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ಪಾಂಡು ಎಲ್.ರಾಠೋಡ ಹೇಳಿದರು.
ನಗರದ ಎಸ್.ಎಸ್ ಮರಗೋಳ ಮಹಾವಿದ್ಯಾಲಯದ ಪದವಿ ಪೂರ್ವ ಕಾಲೇಜಿನಲ್ಲಿ ಸೋಮುವಾರ ನಶೆ ಮುಕ್ತ ಭಾರತ ಘೋಷಣೆ ಅಡಿಯಲ್ಲಿ ನಡೆದ ಎನ್‌ಎಸ್‌ಎಸ್‌ನ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಹಳ್ಳಿಗಳ ಉದ್ಧಾರ ಆಗಬೇಕಾದರೆ ಗ್ರಾಮ ಸ್ವರಾಜ್ಯಕ್ಕೆ ಸಹಕಾರಿಯಾಗಿ ಗುಡಿ ಕೈಗಾರಿಕೆಗೆ ಉತ್ತೇಜನ, ಪಾನ ನಿಷೇಧಕ ಗೋವು ಹತ್ಯೆ ತಡೆಯಬೇಕು ಎಂಬ ಚಿಂತನೆ ಗಾಂಧಿಯವರಿಗೆ ಇತ್ತು. ಈ ದೃಷ್ಠಿಯಿಂದ 1957ರಲ್ಲಿ ರಾಜಸ್ಥಾನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸನ್ನದ್ಧಗೊಳಿಸಲಾಯಿತು ಎಂದರು.
ಎನ್‌ಎಸ್‌ಎಸ್ ಶಿಬಿರದ ಪ್ರಮಾಣ ಪತ್ರದಿಂದ ಶೇ.5 ಮೀಸಲಾತಿ ಲಭಿಸಲಿದೆ, ವಿದ್ಯಾರ್ಥಿಗಳಿಗೆ ಶಿಬಿರದಿಂದ ವ್ಯಕ್ತಿತ್ವ ನಿರ್ಮಾಣದೊಂದಿಗೆ ಸಮಾಜ ನಿರ್ಮಾಣ ಕಾರ್ಯದ ಮೂಲಕ ದೇಶದ ಅಭಿವೃದ್ದಿಗೆ ಕೈಜೋಡಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಬಸವರಾಜ ಹಿರೇಮಠ ಮಾತನಾಡಿ, ಎನ್‌ಎಸ್‌ಎಸ್ ಮೂಲಕ ವ್ಯಕ್ತಿತ್ವ ನಿರ್ಮಾಣ, ಶಿಸ್ತು, ಸೇವಾ ಭಾವನೆ ಬೆಳೆಯುತ್ತದೆ ಎಂದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ.ರಮೇಶ ಭಟ್, ಪತ್ರಕರ್ತ ಲೋಹಿತ ಕಟ್ಟಿ ಮಾತನಾಡಿದರು.
ಗ್ರಂಥಪಾಲಕ ಡಾ.ನಾಗರಾಜ ದೇವತ್ಕಲ್ ವೇದಿಕೆ ಮೇಲೆ ಇದ್ದರು.
ವಿದ್ಯಾರ್ಥಿಗಳಾದ ಸಾಯಿಕುಮಾರ, ಬಸವರಾಜ ಅವರಿಗೆ ಉತ್ತಮ ಶಿಬಿರಾರ್ಥಿ, ನಿಲೋಫರ ಉತ್ತಮ ಭಾಷಣಕಾರ, ಭೀಮಾ, ಕಾವೇರಿ ಉತ್ತಮ ಶಿಬಿರದ ತಂಡಗಳಿಂದ ಆಯ್ಕೆ ಮಾಡಿ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಲ್ಲಿಕಾರ್ಜುನ ಇಂಗಿನ, ಸಿದ್ರಾಮಪ್ಪ ಬಮ್ಮಶೆಟ್ಟಿ. ಪ್ರವೀಣಕುಮಾರ ಲಿಂಗಶೆಟ್ಟಿ. ಶೃತಿ ಪಾಟೀಲ, ರೇಖಾ ಪಾಟೀಲ ಸೇರಿದಂತೆ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಎನ್‌ಎಸ್‌ಎಸ್ ಸಂಯೋಜಕ ರಾಮಣ್ಣ ಇಬ್ರಾಹಿಂಪೂರ ಸ್ವಾಗತಿಸಿ, ಶಿಬಿರದ ವರದಿ ವಾಚಿಸಿದರು. ಶಿವಶಂಕರ ಹಿರೇಮಠ ನಿರೂಪಿಸಿದರು, ಡಾ.ವೆಂಕಟರಾಜಪ್ಪ ವಂದಿಸಿದರು.