ರಾಷ್ಟ್ರಗೀತೆ ಭಾರತದ ಸಾರ್ವಭೌಮತೆಯ ಸಂಕೇತ: ಎಚ್.ಬಿ ಪಾಟೀಲ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ರವೀಂದ್ರನಾಥ ಟ್ಯಾಗೋರ್ ರಚಿಸಿ, ಸಂಗೀತಕ್ಕೆ ಅಳವಡಿಸಿದ ಹಾಗೂ ಕ್ಯಾಪ್ಟನ್ ರಾಮ್‌ಸಿಂಗ ಠಾಕೂರ್ ರಾಗಬದ್ಧವಾಗಿ ಸಂಗೀತ ಸಂಯೋಜಿಸಿರುವ ‘ಜನಗಣಮನ ಅಧಿನಾಯಕ ಜಯಹೇ’ ಎಂಬ ಭಾರತದ ರಾಷ್ಟ್ರಗೀತೆಯು ಭಾರತೀಯರೆಲ್ಲರು ಒಂದೇ ಎಂದು ತಿಳಿಸಿದ, ದೇಶದ ಹಿರಿಮೆ-ಗರಿಮೆ, ಭೌಗೋಳಿಕ ಪ್ರದೇಶ, ನೌಸರ್ಗಿಕ ಸಂಪತ್ತು, ಸಾರ್ವಭೌಮತೆ, ಅಖಂಡತೆ ಸಾರುವ ಗೀತೆಯಾಗಿದ್ದು, ಅದಕ್ಕೆ ಎಲ್ಲರು ಹೃದಯಾಂತರದಿಂದ ಗೌರವ ನೀಡಬೇಕು ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿರುವ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶನಿವಾರ ಜರುಗಿದ ‘ಭಾರತದ ರಾಷ್ಟ್ರಗೀತೆಯ ದಿನಾಚರಣೆ’ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಯ ಜನಕ ರವೀಂದ್ರನಾಥ ಟ್ಯಾಗೋರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ರಾಷ್ಟ್ರಗೀತೆಯ ಪ್ರತಿ ಸಾಲಿನ ವಿವರಣೆ ನೀಡುತ್ತಾ ಮಾತನಾಡಿದ ಅವರು, ರಾಷ್ಟ್ರಗೀತೆಯನ್ನು ಪ್ರಥಮ ಬಾರಿಗೆ 1911ರ ಡಿ.27ರಂದು ಕೋಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು. ಸ್ವಾತಂತ್ರ್ಯ ನಂತರ ಜ.24,1950ರಂದು ದೇಶದ ಅಧಿಕೃತ ರಾಷ್ಟ್ರಗೀತೆಯನ್ನಾಗಿಸಲಾಯಿತು. ಇದನ್ನು ಹಾಡಲು 52 ಸೆಕೆಂಡ್ ಸಮಯ ನಿಗದಿಪಡಿಸಲಾಗಿದೆ. ರಾಷ್ಟ್ರಗೀತೆ ದೇಶದ ಸರ್ವಶ್ರೇಷ್ಠ ಗೀತೆಯಾಗಿದ್ದು, ಅದಕ್ಕೆ ದೊಡ್ಡ ಘನತೆಯಿದೆ. ಅದನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಷ್ಟ್ರ ಲಾಂಛನ, ದೇಶಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ವಿದ್ಯಾರ್ಥಿ ದಿಸೆಯಿಂದಲೆ ತಿಳಿದುಕೊಳ್ಳುವುದು ಅಗತ್ಯವಾಗಿದೆ. ಎಲ್ಲರಲ್ಲಿ ಭಾರತವೆ ನನ್ನ ಮನೆಯೆಂಬ ಭಾವನೆ ಬೆಳೆಸಿಕೊಂಡು ದೇಶ ಪ್ರೇಮ ಮೈಗೂಡಿಸಿಕೊಳ್ಳಬೇಕು. ದೇಶದ ರಕ್ಷಣೆ ಕೇವಲ ಸೈನಿಕರ ಕೆಲಸವಲ್ಲ. ಬದಲಿಗೆ ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಪೂಜಾ ಹೂಗಾರ, ಮುಸ್ಕಾನ ಶೇಖ್, ಸ್ನೇಹಾ ಚವ್ಹಾಣ ಮತ್ತು ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *