ಸುದ್ದಿ ಸಂಗ್ರಹ ಬೆಂಗಳೂರು
ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ಮಾಡುವ ಎಡವಟ್ಟುಗಳಿಗೆ ಏನು ಹೇಳಬೇಕು ಎನ್ನುವುದೆ ಗೊತ್ತಾಗಲ್ಲ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗಿಬಿಡುತ್ವೆ. ಈಗ ಅಂತಹದ್ದೆ ಒಂದು ಮಹಾ ಎಡವಟ್ಟು ಜಯನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಕಳೆದ 2 ದಿನಗಳ ಹಿಂದೆ ತಲೆ ನೋವು ಅಂತ ಜಯನಗರ ಆಸ್ಪತ್ರೆಗೆ ಬಂದಿದ್ದ ಪುನೀತ್ ಸೂರ್ಯ ಎಂಬ ವ್ಯಕ್ತಿ ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದಕ್ಕೆ ಕಾರಣ ಸಿಬ್ಬಂದಿಯೊಬ್ಬ ಮಾಡಿದ ಎಡವಟ್ಟಿನ ಕೆಲಸ.
ವೈದ್ಯರು ರಕ್ತಹೀನತೆ ಆಗಿದೆ, ರಕ್ತ ಕೊಡಬೇಕು ಎಂದಿದ್ದಾರೆ. ಪುನೀತ್ಗೆ ಬೇಕಾಗಿದ್ದು O+ve ಪಾಸಿಟಿವ್ ಬ್ಲಡ್ ಆದರೆ ಆಸ್ಪತ್ರೆ ಸಿಬ್ಬಂದಿ ಕೊಟ್ಟಿದ್ದು A+ve ಪಾಸಿಟಿವ್ ಇದಕ್ಕೆಲ್ಲಾ ಕಾರಣವಾಗಿದ್ದು ಜಯನಗರ ಸಾರ್ವಜನಿಕರ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಉಮೇಶ್.
ಪುನೀತ್ ದೇಹದೊಳಕ್ಕೆ ಎ ಪಾಸಿಟಿವ್ ಬ್ಲಡ್ ಹೋಗ್ತಿದ್ದಂತೆ ಆರೋಗ್ಯದಲ್ಲಿ ಭಾರಿ ಏರುಪೇರು ಕಂಡುಬಂದಿದೆ. ಕೂಡಲೇ ಆಗಿರುವ ಲೋಪ ಮನಗಂಡ ಸಂಬಂಧಿಕರು ರಕ್ತ ಹಾಕಿಸೋದನ್ನು ನಿಲ್ಲಿಸಿ, ಸಿಬ್ಬಂದಿ ವಿರುದ್ಧ ಮುಗಿಬಿದ್ದಿದ್ದಾರೆ. ಯಾಕಪ್ಪ ಹೀಗೆ ಮಾಡ್ದೆ ಅಂದ್ರೆ, ಲ್ಯಾಬ್ ಟೆಕ್ನಿಷಿಯನ್ ಉಮೇಶ್ ಕೊಡುವ ಉತ್ತರ, ನನಗೆ ರಜೆ ಕೊಟ್ಟಿರಲಿಲ್ಲ. ಅದಕ್ಕೆ ಹೀಗೆ ಆಗೋಯ್ತು. ಪ್ರಾಣ ಹೋಗಿಲ್ವಲ್ಲ ಬಿಡಿ ಅಂತ ಉಡಾಫೆ ತೋರಿದ್ದಾನೆ.
ಕೊನೆಗೆ ಈ ವಿಚಾರ ಮುಂದಿಟ್ಟುಕೊಂಡು ಆಸ್ಪತ್ರೆಯ ಮುಖ್ಯಸ್ಥರ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆ, ತಲೆನೋವು ಅನುಭವಿಸಿದ್ದ ಪುನೀತ್ ಸೂರ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಾ ಚೇತರಿಸಿಕೊಳ್ಳುತ್ತಿದ್ದಾನೆ. ಇಂಥ ನಿರ್ಲಕ್ಷ್ಯ ಮತ್ತೊಮ್ಮೆ ಆಸ್ಪತ್ರೆಗಳಲ್ಲಿ ಮರುಕಳಿಸಬಾರದು ಎಂಬ ಉದ್ದೇಶದಿಂದ ಪೋಷಕರು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಬಗ್ಗೆ ವೈದ್ಯಕೀಯ ಅಧೀಕ್ಷಕರು ಮಾತನಾಡಿ, ದೊಡ್ಡ ತಪ್ಪಾಗಿದೆ. ಕ್ಷಮಿಸಿ, ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗದುಕೊಳ್ತಿವಿ ಎಂದಿದ್ದಾರೆ.
ಈ ಬಗ್ಗೆ ಸುದ್ದಿ ಪ್ರಸಾರವಾದ ಕೂಡಲೆ ಲ್ಯಾಬ್ ಟೆಕ್ನೀಷಿಯನ್ ಉಮೇಶ್ ಅಮಾನತು ಮಾಡುವುದಾಗಿ ಹೇಳಿದ್ದಾರೆ.