ಪರಿಸರ ಮಾಲಿನ್ಯ ತಡೆಗೆ ಸಾಮೂಹಿಕ ಪ್ರಯತ್ನ ಅಗತ್ಯ: ಎಚ್.ಬಿ ಪಾಟೀಲ

ನಗರದ

ಕಲಬುರಗಿ: ವಿವಿಧ ಮಾಲಿನ್ಯಗಳಿಂದ ಪರಿಸರ ತತ್ತರಿಸಿ ಹೋಗಿದೆ. ಮಾಲಿನ್ಯ ನಿಯಂತ್ರಣ ನೀತಿ-ನಿಯಮ, ಸರ್ಕಾರ, ಕೆಲವು ಸಂಸ್ಥೆಗಳು, ಪರಿಸರ ಪ್ರೇಮಿಗಳಿಂದ ಮಾತ್ರ ಸಾಧ್ಯವಿಲ್ಲ. ಎಲ್ಲೆಡೆ ವ್ಯಾಪಕವಾಗಿ ಗಿಡಗಳನ್ನು ನೆಟ್ಟು ಪೋಷಿಸುವುದು, ಸ್ವಚ್ಛತೆ ಕಾಪಾಡುವುದು, ಪರಿಸರ ಸ್ನೇಹಿ ವಾತಾವರಣ ನಿರ್ಮಿಸುವ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ ಸಾಮೂಹಿಕ ಪ್ರಯತ್ನ ಅಗತ್ಯ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಹೊಸ ಜೇವರ್ಗಿ ರಸ್ತೆಯಲ್ಲಿನ ಗೆಟ್ಸ್ ಡಿಗ್ರಿ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವ್ಯಾಪಕ ಗಿಡ-ಮರಗಳಿಂದ ಎಕ್ಯೂಐ ಉತ್ತಮವಾಗುತ್ತದೆ. ದೆಹಲಿ ಮಾಲಿನ್ಯದಿಂದ ತತ್ತರಿಸಿದೆ. ಪರಿಸರ ಮಾಲಿನ್ಯ ತಡೆಗೆ ಪ್ಲಾಸ್ಟಿಕ್ ಬಳಕೆ ನಿಷೇಧ, ವನಮಹೋತ್ಸವ, ಜಲಮೂಲಗಳ ಸಂರಕ್ಷಣೆ, ನೀರಿನ ಮಿತ ಬಳಕೆ, ಇ-ತಾಜ್ಯ ಪುನರ್ಬಳಕೆ, ಆಹಾರ ಪದಾರ್ಥ ಹಾಳಾಗದಂತೆ ಎಚ್ಚರವಹಿಸುವುದು, ನವೀಕರಿಸಬಹುದಾದ ಇಂಧನಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕಗೆ ಆದ್ಯತೆ, ವೈಯಕ್ತಿಕ ವಾಹನದ ಬದಲಿಗೆ ಸಾರ್ವಜನಿಕ ಸಾರಿಗೆ ಬಳಸುವುದು, ರಾಸಾಯನಿಕಗಳ ಬಳಕೆ ನಿಷೇಧಿಸುವುದು ಸೇರಿದಂತೆ ಅನೇಕ ಕ್ರಮಗಳನ್ನು ಅನುಸರಿಸುವ ಮೂಲಕ ಮಾಲಿನ್ಯ ತಡೆಗಟ್ಟಬಹುದಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಿ ಕಂಟೆಗೋಳ್ ಮಾತನಾಡಿ, ಮಾಲಿನ್ಯ ತಡೆಗೆ ವ್ಯಾಪಕ ಜಾಗೃತಿ ಅಗತ್ಯ. ವಿದ್ಯಾರ್ಥಿ ದಿಸೆಯಿಂದಲೆ ಪರಿಸರ ಕಾಳಜಿ ಬೆಳೆಸಿಕೊಂಡು, ಮಾಲಿನ್ಯ ಮುಕ್ತ ಪರಿಸರ ನಿರ್ಮಾಣಕ್ಕೆ ಶ್ರಮಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕರಾವಿಪ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್.ಬಿರಾದಾರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *