ಕಲಬುರಗಿ-ಬೆಂಗಳೂರು ವಂದೆ ಭಾರತ್ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ

ಜಿಲ್ಲೆ

ಕಲಬುರಗಿ: ಬಹುಕಾಲದ ಬೇಡಿಕೆಯಾಗಿದ್ದ ಕಲಬುರಗಿ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿದ್ದ ವಂದೆ ಭಾರತ್ ರೈಲು ಸಂಚಾರದ ಸಮಯವನ್ನು ಜನವರಿ 1 ರಿಂದ ಬದಲಾಯಿಸಲು ಕೇಂದ್ರ ರೈಲ್ವೆ ಇಲಾಖೆ ನಿರ್ಧರಿಸಿರುವುದು ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆಯಾಗಿದೆ ಎಂದು ಮಾಜಿ ಸಂಸದ ಡಾ. ಉಮೇಶ್ ಜಾಧವ್ ಹರ್ಷ ವ್ಯಕ್ತಪಡಿಸಿದ್ದಾರೆ.

ಬಹುದಿನಗಳಿಂದ ಕಲಬುರಗಿಯಿಂದ ಬೆಂಗಳೂರಿಗೆ ಹೊರಡುವ ವಂದೆ ಭಾರತ್ ರೈಲಿನ ಸಮಯ ಬದಲಾವಣೆ ಮಾಡುವಂತೆ ಕೋರಿ ಪ್ರಯಾಣಿಕರು ಒತ್ತಾಯಿಸುತ್ತಿದ್ದು, ರೈಲ್ವೆ ಇಲಾಖೆಯವರೊಂದಿಗೆ ಸತತವಾಗಿ ಚರ್ಚಿಸಿದ ಪರಿಣಾಮವಾಗಿ ಮುಂದಿನ ತಿಂಗಳು ಜನವರಿ 1 ರಿಂದ ಬೆಳಗ್ಗೆ 5:15ರ ಬದಲು ಬೆಳಗ್ಗೆ 6:10ಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 2:10ಕ್ಕೆ (ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೈಯಪ್ಪನಹಳ್ಳಿ) ತಲುಪಲಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಿಂದ ಕಲಬುರಗಿಗೆ ಹೊರಡುವ ಸಮಯದಲ್ಲಿ ಯಾವುದೆ ಬದಲಾವಣೆ ಇಲ್ಲ. ಆದರೆ ಇದೀಗ ಈ ರೈಲು ಕಲಬುರಗಿಗೆ ಮೊದಲಿನಿಂದ 45 ನಿಮಿಷ ಬೇಗ ಅಂದರೆ ರಾತ್ರಿ 11:30 ಗಂಟೆಗೆ ಬದಲಾಗಿ ರಾತ್ರಿ 10:45ಕ್ಕೆ ತಲುಪಲಿದೆ. ಒಟ್ಟಾರೆ ಪ್ರಯಾಣದ ಸಮಯ ಇದೀಗ 8 ಗಂಟೆಯಲ್ಲಿ ಪೂರ್ಣಗೊಳ್ಳಲಿದೆ.

ಇನ್ಮುಂದೆ ಪುಟ್ಟಪರ್ತಿ ಸತ್ಯಸಾಯಿ ದರ್ಶನ ಮಾಡುವ ಭಕ್ತರಿಗೆ ಅನುಕೂಲಕರವಾಗುವಂತೆ ಸತ್ಯಸಾಯಿ ಪ್ರಶಾಂತಿ ನಿಲಯದಲ್ಲಿ ವಂದೆ ಭಾರತ್‌ಗೆ ನಿಲುಗಡೆ ಸೌಲಭ್ಯ ನೀಡಿರುವುದು ಇನ್ನಷ್ಟು ಖುಷಿಯ ಸಂಗತಿ ಎಂದು ಜಾಧವ್ ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ರೈಲ್ವೆ ಖಾತೆಯ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ.ಸೋಮಣ್ಣ ಅವರ ಪ್ರಯತ್ನದಿಂದಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ವಂದೆ ಭಾರತ್ ರೈಲು ಪ್ರಯಾಣಿಕರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ. ಈ ಹಿಂದೆ ಬೆಳಗ್ಗೆ 5:10ಕ್ಕೆ ಕಲಬುರಗಿಯಿಂದ ವಂದೆ ಭಾರತ್ ಸಂಚಾರ ಪ್ರಾರಂಭಿಸುತ್ತಿರುವುದರಿಂದ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಸಂಚಾರಕ್ಕೆ ಅನಾನುಕೂಲವಾಗಿತ್ತು. ಬೀದರ್ ಮತ್ತಿತರ ಕಡೆಗಳಿಂದ ಆಗಮಿಸುತ್ತಿರುವ ಪ್ರಯಾಣಿಕರಿಗೂ ಕಷ್ಟ ಸಾಧ್ಯವಾಗಿದ್ದು, ಇದೀಗ ನೂತನ ವೇಳಾಪಟ್ಟಿ ಅತ್ಯಂತ ಅನುಕೂಲಕರವಾಗಲಿದೆ. ಸಾರ್ವಜನಿಕರು ವಂದೆ ಭಾರತ್ ರೈಲು ಸೇವೆಯನ್ನು ಪೂರ್ಣವಾಗಿ ಬಳಸಿಕೊಳ್ಳುವಂತೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *