ಕನ್ನಡ ಉಳಿಸಿ, ಬೆಳೆಸುವ ಕಾರ್ಯ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ: ಮುಡಬಿ ಗುಂಡೇರಾವ

ನಗರದ

ಕಲಬುರಗಿ: ಸಾವಿರಾರು ವರ್ಷಗಳ ಭವ್ಯವಾದ ಇತಿಹಾಸ, ಪರಂಪರೆಯನ್ನು ಹೊಂದಿರುವ ನಮ್ಮ ಕನ್ನಡ ನಾಡಿನ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಬೆಳೆಸಿ, ಮುಂದಿನ ಜನಾಂಗಕ್ಕೆ ತಲುಪಿಸುವ ಕಾರ್ಯ ಪ್ರತಿಯೊಬ್ಬ ಕನ್ನಡಿಗನ ಆದ್ಯ ಜವಾಬ್ದಾರಿಯಾಗಿದೆ ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಅಭಿಮತಪಟ್ಟರು.

ನಗರದ ಆಳಂದ ರಸ್ತೆಯ ವಿವೇಕಾನಂದ ನಗರದಲ್ಲಿನ ಭೊಗೇಶ್ವರ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ರವಿವಾರ ಜರುಗಿದ ಕನ್ನಡ ರಾಜ್ಯೋತ್ಸವ ಮಾಸಾಚರಣೆಯ ಸರಣಿ ಉಪನ್ಯಾಸಕ ಕಾರ್ಯಕ್ರಮ-20ರಲ್ಲಿ ‘ಕನ್ನಡ ನಾಡು-ನುಡಿಯ ಸಂರಕ್ಷಣೆ ಎಲ್ಲರ ಹೊಣೆ’ ಎಂಬ ವಿಷಯದ ಬಗ್ಗೆ ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂಗ್ಲೀಷ್ ಭಾಷೆಯ ಬಗ್ಗೆ ವ್ಯಾಮೋಹ ಬೇಡ. ಬೇರೆ ಭಾಷೆಗಳನ್ನು ಗೌರವಿಸೋಣ. ಆದರೆ ಕನ್ನಡಿಗರಾದ ನಾವು ಕನ್ನಡದಲ್ಲಿ ಮಾತನಾಡುವ, ಓದುವ, ಬರೆಯುವ, ವ್ಯವಹರಿಸುವ ಕನ್ನಡತನ ಪ್ರವೃತ್ತಿ ಎಂದಿಗೂ ಕೂಡಾ ಮರೆಯದಿರೋಣ ಎಂದರು.

ಕನ್ನಡ ಕಟ್ಟುವ ಕೆಲಸ ಪ್ರತಿಯೊಬ್ಬ ಕನ್ನಡಿಗನಿಂದಾಗಬೇಕು. ಕನ್ನಡಕ್ಕಿರುವ ತಾಕತ್ತು ಬೇರೆ ಬಾಷೆಗಿಲ್ಲ. ಕನ್ನಡ ನಾಡು-ನುಡಿಗೆ ಬಸವಾದಿ ಶರಣರ ಕೊಡುಗೆ ಅಪಾರವಾಗಿದೆ. ಅಪ್ಪಟ ಕನ್ನಡಿಗರಾಗಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿ, ಪ್ರತಿಯೊಬ್ಬರಲ್ಲಿ ಕನ್ನಡ ನಾಡಿನ ಬಗ್ಗೆ ಅಪಾರವಾದ ಗೌರವ ಮೈಗೂಡಿಸಿಕೊಂಡಿರಬೇಕು. ಅನೇಕ ತ್ಯಾಗ, ಹೋರಾಟದ ಫಲವಾಗಿ ಕನ್ನಡ ನಾಡು ಉದಯವಾಗಿದೆ. ನಮ್ಮ ಬಳಗದ ವತಿಯಿಂದ ರಾಜ್ಯೋತ್ಸವ ಮಾಸಾಚರಣೆಯ ಪ್ರಯುಕ್ತ ಜಿಲ್ಲೆಯ ವಿವಿಧ ಸ್ಥಳಗಳಿಂದ ಕನ್ನಡದ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನ್ನಡ ಉಳಿಸಿ, ಬೆಳೆಸುವುದು ಕೇವಲ ಕೆಲವು ವ್ಯಕ್ತಿಗಳು, ಸಂಘ-ಸಂಸ್ಥೆಗಳಾಗಿರದೆ, ಸಮಸ್ಥ ಕನ್ನಡಿಗರದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಿಪುತ್ರ ರಾಂಪೂರೆ, ಶಿಕ್ಷಕರಾದ ಮೆಹಬೂಬ್ ನರೋಣಾ, ಮಹಾಂತೇಶ್ ಬಿರಾದಾರ, ರೂಪಾ ಮಡಿವಾಳ, ಪ್ರತಿಭಾ ಯಳಸಂಗಿ, ಸೋಮಶೇಖರ ಪಾಟೀಲ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *