ಕಲಬುರಗಿ: ಶುಕ್ರವಾರ ನಿಧನರಾದ ವೃಕ್ಷಮಾತೆ, ಸಾಲುಮರದ ತಿಮ್ಮಕ್ಕನವರಿಗೆ ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗೌರವಪೂರ್ವಕವಾಗಿ ಮಾತೆಯವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ನುಡಿನಮನ ಸಲ್ಲಿಸಿದ ಉಪನ್ಯಾಸಕ ಎಚ್.ಬಿ ಪಾಟೀಲ್, ಸಾಲುಮರದ ತಿಮ್ಮಕ್ಕನವರು ಕನ್ನಡ ನೆಲದ ಅಪರೂಪದ, ಮಾದರಿಯ ಸಾಧಕಿಯಾಗಿದ್ದಾರೆ. ಅವರೊಬ್ಬ ಭಾರತೀಯ ಪರಿಸರವಾದಿ. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೆ ತಮ್ಮ ಮಕ್ಕಳಂತೆ ಭಾವಿಸಿ ಬೆಳೆಸಿದವರು. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದ್ದಾರೆ. ಅವರಲ್ಲಿರುವ ಪರಿಸರದ ಕಾಳಜಿ ನಮ್ಮೆಲ್ಲರಿಗೆ ಮಾದರಿಯಾಗಿದೆ. ನಾವೆಲ್ಲರು ಗಿಡ-ಮರಗಳನ್ನು ಬೆಳೆಸಿ, ಪರಿಸರವನ್ನು ಕಾಪಾಡುವ ಮೂಲಕ ತಿಮ್ಮಕ್ಕನವರ ತತ್ವವನ್ನು ಆಚರಿಸೋಣ. ಬಸವೇಶ್ವರ ಸಮಾಜ ಸೇವಾ ಬಳಗವು ಕಳೆದ 8.5 ವರ್ಷಗಳಲ್ಲಿ 2,000ಕ್ಕೂ ಅಧಿಕ ಸಸಿಗಳನ್ನು ನೆಡುವುದು ಮತ್ತು ವಿತರಣೆಯ ಕಾರ್ಯ ಮಾಡುವ ಮೂಲಕ ವೃಕ್ಷಮಾತೆ ತಿಮ್ಮಕ್ಕನವರ ತತ್ವವನ್ನು ಅಳವಡಿಸಿಕೊಂಡಿದೆ. ಮಾತೆಯವರ ಅಗಲಿಕೆ ನಾಡು, ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ಪ್ರಮುಖರಾದ ಅಭಿಶೇಕ್, ಶಹೀದ್, ಪ್ರಸನ್ನ್, ವಿಶಾಲ ರೆಡ್ಡಿ, ಮನೋಜಕುಮಾರ, ಕಾವ್ಯಶ್ರೀ, ವಿದ್ಯಾಶ್ರೀ ಪಾಟೀಲ್ ಸೇರಿದಂತೆ ಅನೇಕರು ಇದ್ದರು.