ನವದೆಹಲಿ: ಶ್ರೀನಗರದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವ ಪೋಸ್ಟರ್ಗಳನ್ನು ಹಾಕಿ ಬಂಧನಕ್ಕೆ ಒಳಗಾಗಿ ಫರಿದಾಬಾದ್ ಟೆರರ್ ಗ್ಯಾಂಗ್ ಬಗ್ಗೆ ಬಾಯ್ಬಿಟ್ಟ ಕಾಶ್ಮೀರಿ ವೈದ್ಯ ಆದಿಲ್ ಅಹ್ಮದ್ ರಾಥರ್ಗೆ ತಿಂಗಳಿಗೆ 5 ಲಕ್ಷ ರೂ. ಸಂಬಳ ಸಿಗುತ್ತಿತ್ತು.
ದಕ್ಷಿಣ ಕಾಶ್ಮೀರದ ಖಾಜಿಗುಂಡ್ ನಿವಾಸಿಯಾಗಿರುವ ಆದಿಲ್ ಅಹ್ಮದ್ ರಾಥರ್ ಅಕ್ಟೋಬರ್ 2024 ರವರೆಗೆ ಅನಂತನಾಗ್ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ (ಜಿಎಂಸಿ) ಹಿರಿಯ ರೆಸಿಡೆಂಟ್ ಆಗಿ ಕೆಲಸ ಮಾಡಿದ್ದ. ಬಳಿಕ ಈ ವರ್ಷದ ಮಾರ್ಚ್ನಲ್ಲಿ ಉತ್ತರ ಪ್ರದೇಶದ ಸಹರಾನ್ಪುರಕ್ಕೆ ತೆರಳಿದ್ದನು.
ಮೊದಲು ವಿ-ಬ್ರಾಸ್ ಆಸ್ಪತ್ರೆಗೆ ಸೇರಿದ ನಂತರ ಪ್ರಸಿದ್ಧ ಮೆಡಿಕೇರ್ ಆಸ್ಪತ್ರೆಯಲ್ಲಿ ಕೆಲಸದ ಗುತ್ತಿಗೆಗೆ ಆದಿಲ್ ಸಹಿ ಹಾಕುತ್ತಾನೆ. ಪೊಲೀಸ್ ದಾಖಲೆಗಳ ಪ್ರಕಾರ ಈತನಿಗೆ ತಿಂಗಳಿಗೆ 5 ಲಕ್ಷ ರೂ. ಸಂಬಳ ಸಿಗುತ್ತಿತ್ತು. ಅಷ್ಟೆ ಅಲ್ಲದೆ ವಸತಿಗಾಗಿ 10 ಸಾವಿರ ರೂ. ಭತ್ಯೆ ಪ್ರತ್ಯೇಕವಾಗಿ ಸಿಗುತ್ತಿತ್ತು.
ಬಾಪು ಬಿಹಾರ ಕಾಲೋನಿಯಲ್ಲಿ ಎರಡು ಬೆಡ್ರೂಮ್ ಮನೆಯಲ್ಲಿ ವಾಸವಿದ್ದ ಆದಿಲ್ ತಡರಾತ್ರಿ ಭೇಟಿ ನೀಡುವವರನ್ನು ಹೊರತುಪಡಿಸಿ ನೆರೆಮನೆಯವರ ಜೊತೆ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಈ ವರ್ಷದ ಸೆಪ್ಟೆಂಬರ್ 26 ರಂದು ದಿಢೀರ್ ರಜೆ ತೆಗೆದುಕೊಂಡು ಅಕ್ಟೋಬರ್ 4 ರಂದು ಜಮ್ಮುವಿನಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯನ್ನು ಆದಿಲ್ ಮದುವೆಯಾಗಿ ಸಹರಾನ್ಪುರಕ್ಕೆ ಮರಳಿದ್ದನು.
ಅಕ್ಟೋಬರ್ 27ರ ರಾತ್ರಿ ಶ್ರೀನಗರದ ರೈನಾವರಿ ಮತ್ತು ಜಡಿಬಲ್ ಪ್ರದೇಶಗಳಲ್ಲಿನ ಗೋಡೆಗಳ ಮೇಲೆ ಜೈಶ್-ಎ-ಮೊಹಮ್ಮದ್ ಸಂಘಟನೆಯನ್ನು ಬೆಂಬಲಿಸುವ ಪೋಸ್ಟರ್ಗಳು ಕಾಣಿಸಿಕೊಂಡಿತ್ತು. ಜಿಹಾದ್ಗೆ ಕರೆ ನೀಡುವ ಪೋಸ್ಟ್ಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದ ಜಮ್ಮು ಕಾಶ್ಮೀರ ಪೊಲೀಸರು ಸಿಸಿಟಿವಿ ಮತ್ತು ಮೊಬೈಲ್ ಡೇಟಾ ಆಧಾರದಲ್ಲಿ ಮೆಡಿಕೇರ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಆದೀಲ್ನನ್ನು ನ.6 ರಂದು ಬಂಧಿಸುತ್ತಾರೆ.
ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಆರೋಪ ಹೊರಿಸಿ ವಿಚಾರಣೆ ನಡೆಸಿದಾಗ ಫರಿದಾಬಾದ್ ಟೆರರ್ ಗ್ಯಾಂಗ್ ಬಗ್ಗೆ ಬಾಯಿ ಬಿಟ್ಟಿದ್ದಾನೆ. ದೆಹಲಿ-ಎನ್ಸಿಆರ್, ಹರಿಯಾಣ ಮತ್ತು ಜಮ್ಮು ಕಾಶ್ಮೀರದಲ್ಲಿರುವ ಸದಸ್ಯರ ಬಗ್ಗೆ ಹೇಳಿದ್ದಾನೆ. ನಂತರ ಪೊಲೀಸರು ಅನಂತ್ನಾಗ್ನ ಜಿಎಂಸಿ ಮೇಲೆ ದಾಳಿ ನಡೆಸಿ ಆದಿಲ್ನ ಲಾಕರ್ನಿಂದ ಎಕೆ -47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯುತ್ತಾರೆ.
2019ರ ಪುಲ್ವಾಮಾ ದಾಳಿ ನಡೆಸಿದ ಜೈಷ್-ಎ-ಮೊಹಮ್ಮದ್ ಮತ್ತು ಷರಿಯಾ ನಿಯಮವನ್ನು ಪ್ರತಿಪಾದಿಸುವ ಸ್ಥಳೀಯ ಶಾಖೆಯಾದ ಅನ್ಸರ್ ಘಜ್ವತ್-ಉಲ್-ಹಿಂದ್ ಎರಡರೊಂದಿಗೆ ಈತ ಸಂಬಂಧ ಹೊಂದಿದ್ದಾನೆ. ಸಹರಾನ್ಪುರದಲ್ಲಿರುವ ತನ್ನ ಆಕ್ಸಿಸ್ ಬ್ಯಾಂಕ್ ಖಾತೆಯಿಂದ ಶ್ರೀನಗರದಲ್ಲಿರುವ ತನ್ನ ಸಹೋದರನ ಖಾತೆಗೆ 15-20 ಲಕ್ಷ ರೂ. ಹಣವನ್ನು ಕಳುಹಿಸಿದ್ದ. ಈ ಹಣವನ್ನು ಉಗ್ರ ಚಟುವಟಿಕೆ ನಡೆಸಲು ವರ್ಗಾವಣೆ ಮಾಡಲಾಗಿದ್ಯಾ ಎಂಬ ನಿಟ್ಟಿನಲ್ಲಿ ಈಗ ತನಿಖೆ ನಡೆಯುತ್ತಿದೆ.
ಮೆಡಿಕೇರ್ ಆಸ್ಪತ್ರೆ ವ್ಯವಸ್ಥಾಪಕ ಮನೋಜ್ ಮಿಶ್ರಾ ಆದಿಲ್ ಬಂಧನದ ವಿಚಾರ ತಿಳಿದು ಶಾಕ್ ಆಗಿದ್ದಾರೆ. ಮೃದುಭಾಷಿ, ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿದ್ದ. ಆತ ಉಗ್ರ ಚಟುವಟಿಕೆ ನಡೆಸುವ ಬಗ್ಗೆ ಎಲ್ಲಿಯೂ ನಮಗೆ ಅನುಮಾನ ಬರುತ್ತಿರಲಿಲ್ಲ. ಹಿರಿಯ ವೈದ್ಯರ ಶಿಫಾರಸಿನ ಆಧಾರದಲ್ಲಿ ಆದಿಲ್ನನ್ನು ನೇಮಿಸಿಕೊಂಡಿದ್ದೆವೆ. ಪೊಲೀಸರಿಂದ ಮಾಹಿತಿ ಪಡೆದ ನಂತರ ಆದೀಲ್ನನ್ನು ತಕ್ಷಣವೇ ವಜಾಗೊಳಿಸಲಾಗಿದೆ. ನಮ್ಮ ಆಸ್ಪತ್ರೆಗೆ ಆದಿಲ್ನನ್ನು ಸೇರಿಸಿದ್ದ ಹಿರಿಯ ವೈದ್ಯ ಡಾ. ಬಾಬರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.