ಸುದ್ದಿ ಸಂಗ್ರಹ ಕಲಬುರಗಿ
ಕರ್ನಾಟಕ ಏಕೀರಣದ ಯಶೋಗಾಥೆ ಅವಿಸ್ಮರಣೀಯವಾಗಿದ್ದು, ವಿದ್ಯಾರ್ಥಿ ದಿಸೆಯಿಂದಲೇ ನಾಡು-ನುಡಿಯ ಬಗ್ಗೆ ತಿಳಿದುಕೊಂಡು ಸೇವೆ ಸಲ್ಲಿಸಬೇಕು ಎಂದು ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಹೇಳಿದರು.
ನಗರದ ವಿದ್ಯಾ ನಗರದಲ್ಲಿನ ರಾಜೀವ ಗಾಂಧಿ ಸ್ಮಾರಕ ಅನುದಾನಿತ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಮಾಸಾಚರಣೆಯ ಪ್ರಯುಕ್ತ ಗುರುವಾರ ಹಮ್ಮಿಕೊಂಡಿರುವ ಸರಣಿ ಉಪನ್ಯಾಸ-5 : ‘ಕರ್ನಾಟಕದ ಏಕೀಕರಣದ ಯಶೋಗಾಥೆ’ಯ ವಿಷಯದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಮಾತನಾಡುವ ಎಲ್ಲರನ್ನು ಒಟ್ಟುಗೂಡಿಸಿ ಅಖಂಡ ಕರ್ನಾಟಕ ಏಕೀಕರಣಗೊಳಿಸಲು ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಆರ್.ಎಚ್ ದೇಶಪಾಂಡೆ, ಕುವೆಂಪು, ಬೇಂದ್ರೆ ಸೇರಿದಂತೆ ಅನೇಕ ಕನ್ನಡದ ಮಹನೀಯರು ಸಾಕಷ್ಟು ಶ್ರಮಿಸಿದ್ದಾರೆ. ಕನ್ನಡ ಭಾಷಿಗರನ್ನು ಒಳಗೊಂಡ 1956ರಲ್ಲಿ ಮೈಸೂರು ರಾಜ್ಯ ಉದಯವಾಗಿ, ನಂತರ 1973ರಲ್ಲಿ ‘ಕರ್ನಾಟಕ’ ಎಂಬ ಮರುನಾಮಕರಣ ಮಾಡಲಾಯಿತು ಎಂದರು.
ಬ್ರಿಟಿಷ್ ಆಡಳಿತದ ಅಡಿಯಲ್ಲಿ ವಿಭಜನೆಯಾಗಿದ್ದ ಕನ್ನಡ ಭಾಷೆಯ ಪ್ರದೇಶಗಳನ್ನು ಒಗ್ಗೂಡಿಸಲು ದಶಕಗಳ ಚಳವಳಿಯ ಫಲಿತಾಂಶವೇ ಕರ್ನಾಟಕದ ಏಕೀಕರಣವಾಗಿದೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಮೈಸೂರು, ಹೈದರಾಬಾದ್, ಬ್ರಿಟಿಷ್ ಆಡಳಿತದ ಅಡಿಯಲ್ಲಿ ವಿವಿಧ ಪ್ರದೇಶಗಳಾಗಿ ಹಂಚಿಹೋಗಿದ್ದ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಏಕೀಕರಣ ಚಳವಳಿ ಆರಂಭವಾಯಿತು ಎಂದರು.
ಕನ್ನಡ ಕುಲಪುರೋಹಿತ ಎಂಬ ಖ್ಯಾತಿಯ ಆಲೂರು ವೆಂಕಟರಾಯರು ಈ ಚಳವಳಿಯ ಪ್ರಮುಖ ನಾಯಕರಾಗಿದ್ದರು. ಕರ್ನಾಟಕ ವಿದ್ಯಾವರ್ಧಕ ಸಂಘಟನೆಗಳು, ವಿವಿಧ ಸಮಿತಿಗಳು, ವ್ಯಕ್ತಿಗಳ ಪಾತ್ರ ಪ್ರಮುಖವಾಗಿದೆ ಎಂದು ಏಕೀಕರಣದ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಮನೋಜ್ಞವಾಗಿ ವಿವರಿಸಿದರು.
ಶಾಲೆಯ ಶಿಕ್ಷಕ ಭೀಮಾಶಂಕರ ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪಠ್ಯದ ಜೊತೆ ನಾಡು-ನುಡಿಯ ಬಗ್ಗೆ ತಿಳಿದುಕೊಳ್ಳಬೇಕು. ಕನ್ನಡದ ಬಗ್ಗೆ ಅಪಾರವಾದ ಗೌರವ, ಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಶಾಲೆಯ ಮುಖ್ಯ ಶಿಕ್ಷಕ ಸಾಯಬಣ್ಣ ಜಿ.ಬೆಳಾಮ್, ಶಿಕ್ಷಕರಾದ ರವಿಕಾಂತ ಬಿಡಕರ್, ರಾಜಶೇಖರ ಪಾಟೀಲ, ನಾಗವೇಣಿ ಪಟ್ಟೇದಾರ, ಭಾಗ್ಯಶ್ರೀ ಮಠ, ಸುಷ್ಮಾ ದೊಡ್ಡಮನಿ, ಪ್ರೇರಣಾ ಬಾಲಚಂದ್ರ, ಸೇವಕ ಶ್ರೀಶೈಲ್ ಕೊಟ್ರೆ ಹಾಗೂ ವಿದ್ಯಾರ್ಥಿಗಳು ಇದ್ದರು.