ಕಲಬುರಗಿ: ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ 12ನೇ ಶತಮಾನದಲ್ಲಿ ಜರುಗಿದ ಸಾಮಾಜಿಕ ಚಳುವಳಿಯಲ್ಲಿ ಚನ್ನಬಸವಣ್ಣನವರು ಸಾಕಷ್ಟು ಶ್ರಮಿಸಿದ್ದಾರೆ. ಅಮೂಲ್ಯವಾದ ವಚನಗಳನ್ನು ರಚಿಸಿ, ರಕ್ಷಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವಿರಳ ಜ್ಞಾನಿಯಾಗಿದ್ದ ಅವರ ಕೊಡುಗೆ ಅನನ್ಯವಾಗಿದೆ. ಅವರು ಪ್ರಮುಖ ವಚನಕಾರರಾಗಿದ್ದು, ಶರಣರ ಕ್ರಾಂತಿಯ ನಂತರ ವಚನಗಳನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ದೇವಿ ನಗರ ಕಮಾನ್ ಹತ್ತಿರದ ಬಿರಾದಾರ ಕಾಂಪೆಕ್ಸ್ ಆವರಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಐತಿಹಾಸಿಕ, ಸಾರ್ವಕಾಲಿಕ ದಾಖಲೆಯ 5900ನೇ ಕಾರ್ಯಕ್ರಮವಾದ ‘ಅವಿರಳ ಜ್ಞಾನಿ ಶರಣ ಚನ್ನಬಸವಣ್ಣನವರ 853ನೇ ಜಯಂತಿ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಅವಿರಳ ಜ್ಞಾನಿ, ಚಿನ್ಮಯಜ್ಞಾನಿ, ಷಟಸ್ಥಲ ಚಕ್ರವರ್ತಿ, ಚಿಕ್ಕದಣ್ಣಾಯಕ, ವಿಶ್ವಗುರು ಬಸವಣ್ಣನವರ ಸೋದರ ಅಳಿಯರಾದ ಅವರು, ಶರಣರ ಸಾಮಾಜಿಕ ಚಳುವಳಿಗೆ ಪ್ರಮುಖವಾದ ಕೊಡುಗೆ ನೀಡಿದ್ದಾರೆ. ಕಲ್ಯಾಣ ಕ್ರಾಂತಿಯ ನಂತರ ವಚನಗಳನ್ನು ಉಳಿಸಿ ಉಳವಿಗೆ ಸಾಗಿಸುವ ಜವಾಬ್ದಾರಿ ನಿರ್ವಹಿಸಿದರು. ಅನುಭವ ಮಂಟಪದ ಸದಸ್ಯರಿಗೆ ಅಕ್ಕಮಹಾದೇವಿಯವರನ್ನು ಪರಿಚಯಿಸಿದರು. ಚನ್ನಬಸವಣ್ಣನವರು ‘ಕೂಡಲ ಚೆನ್ನಸಂಗಮದೇವ’ ಎಂಬ ಅಂಕಿತನಾಮದೊಂದಿಗೆ ರಚಿಸಿದ ಒಟ್ಟು 1776 ವಚನಗಳು ಲಭ್ಯವಾಗಿವೆ. ಷಟಸ್ಥಲ ಸಿದ್ಧಾಂತಕ್ಕೆ ಅಡಿಪಾಯ ಹಾಕಿದ್ದು ಅವರು ಪ್ರಮುಖ ಕೊಡುಗೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಡಾ.ರಾಜಶೇಖರ ಪಾಟೀಲ್, ಮಲ್ಲಿನಾಥ ದಂಗಾಪುರ, ರೇವಣಸಿದ್ದಪ್ಪ ಪವಾಡಶೆಟ್ಟಿ, ಹಣಮಂತರವಾವ ಭೈರಾಮಡಗಿ, ಮಲ್ಲಿನಾಥ ದೇಗಾಂವ, ಅಜಯ ಎಸ್.ಬಿರಾದಾರ, ವಿಜಯ ಎಸ್.ಬಿರಾದಾರ, ಚಂದ್ರಕಾಂತ ನರೋಣಿ, ಸಂತೋಷಕುಮಾರ ಮಾಲಿಪಾಟೀಲ್ ಸೇರಿದಂತೆ ಅನೇಕರು ಇದ್ದರು.