ಕೆಲವರಿಗೆ ಉಗುರು ಬಿಡುವುದು ಎಂದರೆ ಬಲು ಪ್ರೀತಿ. ಅದಕ್ಕೆ ನಾನಾ ರೀತಿಯಲ್ಲಿ ಸಿಂಗಾರ ಮಾಡಿ ಬಣ್ಣ ಬಣ್ಣದ ನೈಲ್ ಪೊಲಿಶ್ ಹಚ್ಚಿಕೊಳ್ಳುತ್ತಾರೆ. ಇದು ಹುಡುಗಿಯರಿಗೆ ಮಾತ್ರ ಸೀಮಿತವಾಗಿಲ್ಲ. ಕೆಲವು ಹುಡುಗರು ಕೂಡ ಉಗುರನ್ನು ಬೆಳೆಸುತ್ತಾರೆ. ಇದು ಕೈಗಳ ಅಂದವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ ಎಂಬುದು ಹಲವರ ನಂಬಿಕೆ ಆದರೆ ಕೆಲವರಿಗೆ ಸ್ವಲ್ಪ ಉಗುರು ಬರುವುದರೊಳಗೆ ಅದು ತನ್ನಿಂದ ತಾನಾಗಿಯೇ ಮುರಿದು ಹೋಗುತ್ತದೆ. ಈ ರೀತಿ ನಿಮ್ಮ ಉಗುರುಗಳು ಕೂಡ ದುರ್ಬಲವಾಗಿದ್ದರೆ ಅಥವಾ ಆಗಾಗ ಮುರಿದು ಹೋಗುತ್ತಿದ್ದರೆ ಅದಕ್ಕೆ ಕಾರಣ ಜೀವಸತ್ವಗಳ ಕೊರತೆ. ಇದು ದೇಹದ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಉಗುರು ದುರ್ಬಲವಾಗುವುದು ಕೂಡ ದೇಹದ ಆಂತರಿಕ ಆರೋಗ್ಯದ ಸೂಚನೆಯಾಗಿದೆ. ಹಾಗಾದರೆ ಯಾವ ವಿಟಮಿನ್ ಕೊರತೆಯಾದಾಗ ಈ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಬಿ12 (Vitamin B12) ಕೊರತೆಯಾಗದಂತೆ ತಡೆಯಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಯಾವ ವಿಟಮಿನ್ ಕೊರತೆಯಿಂದ ಈ ಸಮಸ್ಯೆ ಬರುತ್ತೆ ?
ಉಗುರುಗಳು ದುರ್ಬಲವಾಗುವುದು ಮುಖ್ಯವಾಗಿ ವಿಟಮಿನ್ ಬಿ12 ಕೊರತೆಯಿಂದ ಉಂಟಾಗುತ್ತದೆ. ಈ ಅಗತ್ಯ ವಿಟಮಿನ್ ಉಗುರುಗಳ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಇದೆ ರೀತಿ ನಿಮ್ಮ ಉಗುರುಗಳು ಕೂಡ ಆಗಾಗ ಮುರಿಯುತ್ತಿದ್ದರೆ, ನೀವು ಕೂಡ ವಿಟಮಿನ್ ಬಿ12 ಮಟ್ಟವನ್ನು ಪರೀಕ್ಷಿಸುವುದು ಬಹಳ ಒಳಿತು.
ಉಗುರಿನಲ್ಲಿ ಕಂಡುಬರುವ ಬಿ12 ಕೊರತೆಯ ಲಕ್ಷಣಗಳು: ವಿಟಮಿನ್ ಬಿ12 ಕೊರತೆಯು ಉಗುರುಗಳ ಮೇಲೆ ಮಾತ್ರವಲ್ಲದೆ ಇಡಿ ದೇಹದ ಮೇಲೆ ಪರಿಣಾಮ ಬೀರುತ್ತದೆ. ಉಗುರುಗಳು ಹಳದಿ ಬಣ್ಣಕ್ಕೆ ತಿರುಗಬಹುದು, ಮಾತ್ರವಲ್ಲ ಸುಲಭವಾಗಿ ಮುರಿದು ಹೋಗುವುದು ಬಿ12 ಕೊರತೆಯ ಸಾಮಾನ್ಯ ಲಕ್ಷಣವಾಗಿದೆ.
ಬಿ12 ಕೊರತೆಯಾದಾಗ ದೇಹದಲ್ಲಿ ಕಂಡುಬರುವ ಲಕ್ಷಣಗಳು: ನಿರಂತರ ಆಯಾಸ ಮತ್ತು ದೌರ್ಬಲ್ಯ, ದೇಹದಲ್ಲಿ ಆಲಸ್ಯ, ಉಸಿರಾಟದ ತೊಂದರೆ ಅಥವಾ ಆಗಾಗ ತಲೆತಿರುಗುವಿಕೆ ಬಿ12 ಕೊರತೆಯ ಮುಖ್ಯ ಲಕ್ಷಣವಾಗಿದೆ.
ಬಿ12 ಕೊರತೆಯಾಗದಂತೆ ತಡೆಯುವುದು ಹೇಗೆ ?
ನಿಮ್ಮ ದೇಹದಲ್ಲಿ ವಿಟಮಿನ್ ಬಿ12 ಕೊರತೆ ಇದ್ದರೆ, ನೀವು ಸೇವನೆ ಮಾಡುವ ಆಹಾರದಲ್ಲಿ ಈ ಆಹಾರಗಳನ್ನು ಸೇರಿಸಿಕೊಳ್ಳುವ ಮೂಲಕ ಅದನ್ನು ನೀಗಿಸಬಹುದಾಗಿದೆ. ಅವು ಯಾವುದೆಂದರೆ ಕೋಳಿ, ಮೀನು ಮತ್ತು ಮೊಟ್ಟೆ. ಇವುಗಳನ್ನು ನಿಯಮಿತವಾಗಿ ಸೇವನೆ ಮಾಡಬೇಕು, ಅಲ್ಲದೆ ಹಾಲನ್ನು ಕೂಡ ಯಥೇಚ್ಛವಾಗಿ ಸೇವನೆ ಮಾಡಬೇಕು. ಏಕೆಂದರೆ ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಬಿ12 ಇರುತ್ತದೆ. ಸಾಧ್ಯವಾದಲ್ಲಿ ಹೆಸರು ಬೇಳೆ ಕೂಡ ಸೇವನೆ ಮಾಡಬಹುದು. ಇದೆಲ್ಲದರ ಜೊತೆಗೆ ವೈದ್ಯರನ್ನು ಸಂಪರ್ಕ ಮಾಡಿ ಆ ಬಳಿಕ ವಿಟಮಿನ್ ಬಿ12 ಪೂರಕಗಳನ್ನು (ಮಾತ್ರೆಗಳು) ಸಹ ತೆಗೆದುಕೊಳ್ಳಬಹುದು. ಯಾವುದೆ ಆಹಾರ ಕ್ರಮದಲ್ಲಿ ಬದಲಾವಣೆಗಳನ್ನು ಮಾಡುವ ಮೊದಲು ಅಥವಾ ಪೂರಕಗಳನ್ನು ಪ್ರಾರಂಭಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.