ಕಲಬುರಗಿ: ಪ್ರಸ್ತುತ ದಿನಗಳಲ್ಲಿ ತೀರ್ವ ಸ್ಪರ್ಧೆ ಎದುರಿಸ ಬೇಕಾಗಿರುವುದರಿಂದ ಯುವಕರು ಪದವಿ ಜೊತೆಗೆ ಸೃಜನಶೀಲ ಗುಣ, ಕ್ರೀಯಾಶೀಲತೆ, ಸಾಧಿಸುವ ಪ್ರಭಲ ಇಚ್ಛಾಶಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರ್ಮೆ ಹೇಳಿದರು.
ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್ ಎದುರುಗಡೆಯ ಶಾರದಾ ವಿವೇಕ ಮಹಿಳಾ ಪದವಿ ಕಾಲೇಜ್’ನಲ್ಲಿ ಕಲಬುರಗಿಯ ಮೇರಾ ಯುವ ಭಾರತ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಕೇಂದ್ರ ಸಂವಹನ ಇಲಾಖೆ, ಶಾರದಾ ವಿವೇಕ ಮಹಿಳಾ ಪದವಿ ಕಾಲೇಜ್, ಸ್ವಾಮಿ ವಿವೇಕಾನಂದ ಯುವಕ ಸಂಘ, ಕರ್ನಾಟಕ ಯುವ ಸಂಘ ಮತ್ತು ಸಂಸ್ಥೆಗಳ ಒಕ್ಕೂಟ’ ಇವೆಲ್ಲ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಪ್ರಮುಖ ಯೋಜನೆಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಸಾಧಿಸುವ ಮನಸ್ಸು ಬೇಕು. ಯುವಕರ ಸಾಧನೆಗೆ ಸೂಕ್ತ ಮಾರ್ಗದರ್ಶನ ತರಬೇತಿ ಅಗತ್ಯವಾಗಿದೆ. ವಿದ್ಯಾರ್ಥಿ ದಿಸೆಯಿಂದಲೇ ನಿಗದಿತ ಗುರಿಯನ್ನಿಟ್ಟುಕೊಂಡು ನಿರಂತರವಾಗಿ ಪ್ರಯತ್ನಿಸಿದರೆ ಉನ್ನತವಾದ ಸಾಧನೆ ಸಾಧ್ಯವಾಗುತ್ತದೆ ಎಂದರು.
ಯೋಜನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಎಸ್.ಬಿ.ಐ.ನ ಮುಖ್ಯ ವ್ಯವಸ್ಥಾಪಕ ಸದಾಶಿವ ವಿ.ರಾತ್ರಿಕರ್, ಎಲ್ಲರಿಗೂ ಬ್ಯಾಂಕಿಂಗ್ ವ್ಯವಹಾರ ಜ್ಞಾನ ಅಗತ್ಯ. ಖಾತೆಗಳನ್ನು ತೆರೆದು ಉಳಿತಾಯ ಮಾಡಬೇಕು. ಪಿಎಂಎಸ್‌ಬಿವೈ, ಪಿಎಂಜೆಜೆವೈ, ಅಪಿವೈ, ಪಿಎಂಜೆಎವೈ, ಮುದ್ರಾ ಜೋಯನೆ, ಪಿಎಂಕೆವಿವೈ, ಜೆಜೆಎಂ ಸೇರಿದಂತೆ ಇನ್ನಿತರ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ ಮಾತನಾಡಿ, ಯುವಶಕ್ತಿ ದೇಶಕ್ಕೆ ಅಮೂಲ್ಯವಾದ ಸಂಪನ್ಮೂಲವಾಗಬೇಕು. ಆತ್ಮವಿಶ್ವಾಸ, ಛಲಗಾರಿಕೆ ಮೈಗೂಡಿಸಿಕೊಳ್ಳಿ. ಹೆತ್ತ ತಂದೆ-ತಾಯಿ, ಗುರು-ಹಿರಿಯರು, ದೇಶಕ್ಕೆ ಗೌರವ ನೀಡಿ. ನಿರಂತರ ಪರಿಶ್ರಮದಿಂದ ನಮ್ಮ ಭಾಗದಿಂದ ಹೆಚ್ಚಿನ ಜನರು ಸಾಧಕರಾಗಿ ಹೊರಹೊಮ್ಮಿ ಎಂದು ಅನೇಕ ದೃಷ್ಟಾಂತಗಳೊಂದಿಗೆ ವಿದ್ಯಾರ್ಥಿನಿಯರಿಗೆ ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಚ್.ಬಿ ಪಾಟೀಲ್, ಕಾಲೇಜಿನ ಪ್ರಾಚಾರ್ಯ ಹಣಮಂತರಾಯ ಗುಡ್ಡೇವಾಡಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಕರ್ನಾಟಕ ಯುವ ಸಂಘ ಮತ್ತು ಸಂಸ್ಥೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ರಾಜು ಎಂ.ಅವರಾದ, ಪ್ರಮುಖರಾದ ನಾಗಪ್ಪ ಅಂಬಾಗೋಳ,ಕಾರ್ತಿಕ, ಶಿವಕುಮಾರ, ನಾಗರಾಜ ಹಾಗೂ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವಿದ್ಯಾರ್ಥಿನಿ ಕಾವೇರಿ ನಿರೂಪಿಸಿ, ವಂದಿಸಿದಳು, ನಂತರ ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.