ಮುಂಬೈ: ಮಹಾನಗರಿ ಮುಂಬೈನಲ್ಲಿ ಕಳೆದು ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಖ್ಯಾತ ಬಾಲಿವುಡ್ ನಟ, ನಟಿಯರ ಮನೆ ಜಲಾವೃತಗೊಂಡಿವೆ. ಬುಧವಾರ ಕೂಡ ಮುಂಬೈನಲ್ಲಿ ಭಾರಿ ಮಳೆಯಾಗಿದೆ, ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಅಪಾರ ಪ್ರಮಾಣದ ಹಾನಿಯುಂಟಾಗಿದೆ, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಧಾರಾಕಾರ ಮಳೆಯಿಂದಾಗಿ ಬಾಲಿವುಡ್ ಸೆಲೆಬ್ರೆಟಿಗಳ ಮನೆಗೂ ನೀರು ನುಗ್ಗಿದೆ. ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಸನ್ನಿ ಡಿಯೋಲ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವರ ಮನೆಗಳಿಗೆ ನೀರು ನುಗ್ಗಿ ಅವಾಂತರ ಉಂಟಾಗಿದೆ.
ಈ ಕುರಿತು ವ್ಲಾಗರ್ ಓರ್ವ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಜುಹುವಿನಲ್ಲಿರುವ ಅಮಿತಾಬ್ ಬಚ್ಚನ್ ಅವರ ಎರಡನೇ ಮನೆಯಾದ `ಪ್ರತೀಕ್ಷಾ’ದ ಹೊರಗೆ ಕೆಸರು ತುಂಬಿಕೊಂಡಿದೆ. ಸ್ವತಃ ಅಮಿತಾಬ್ ಬಚ್ಚನ್ ಅವರೇ ವೈಪರ್‌ನಿಂದ ನೆಲ ಒರೆಸುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಎಷ್ಟೇ ಶ್ರೀಮಂತರಾಗಿದ್ದರೂ ಮುಂಬೈ ಮಳೆಯಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ನಮ್ಮ ರಾಜ್ಯದಲ್ಲಿಯೂ ಮಳೆ ಅಬ್ಬರ ಜೋರಾಗಿದೆ, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದರಿಂದ ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿ ಬಂದ್ ಆಗಿದೆ. ಗೋಕಾಕ್ ನಗರದ ನದಿ ತೀರದ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಲೋಳಸೂರ ಸೇತುವೆ ಜಲಾವೃತಗೊಂಡಿದೆ, ಮಹಾರಾಷ್ಟ್ರದ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಳಿಸಲಾಗಿದೆ.
ಹಾವೇರಿ ಜಿಲ್ಲೆ ಮತ್ತು ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾದ ಹಿನ್ನೆಲೆ ವರದಾ ನದಿ ಮೈದುಂಬಿ ಹರಿಯುತ್ತಿದೆ. ನದಿಯ ದಂಡೆಯಲ್ಲಿರುವ ಈಶ್ವರನ ದೇವಸ್ಥಾನ ಜಲದಿಗ್ಬಂಧನವಾಗಿದೆ. ಗಡಿಜಿಲ್ಲೆ ಬೀದರ್‌ನಲ್ಲಿ ನಿರಂತರವಾಗಿ ಮಹಾಮಳೆ ಹಾಗೂ ಕಾರಂಜ ಜಲಾಶಯದಿಂದ ಅಪಾರ ಪ್ರಮಾಣದ ನೀರು ಮಾಂಜ್ರಾ ನದಿಗೆ ಬಿಡುಗಡೆ ಮಾಡಲಾಗಿದೆ. ಐತಿಹಾಸಿಕ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಧಾರವಾಡ ಜಿಲ್ಲೆಯಲ್ಲಿ ಮಳೆಯಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಯೂರಿಯಾ ಗೊಬ್ಬರಕ್ಕಾಗಿ ಕೊಪ್ಪಳದಲ್ಲಿ ರೈತರನ್ನು ನಿಯಂತ್ರಿಸಲು ಪೊಲೀಸರು ಸುಸ್ತಾಗಿದ್ದಾರೆ.