ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೆಂಪು ಕೋಟೆಯಲ್ಲಿ 79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಬರೋಬ್ಬರಿ 1 ಗಂಟೆ 43 ನಿಮಿಷಗಳ ಕಾಲ ಭಾಷಣ ಮಾಡಿದ್ದಾರೆ. ಈ ಮೂಲಕ ದೀರ್ಘ ಭಾಷಣ ಮಾಡಿದ ಪ್ರಧಾನಿ ಎನಿಸಿಕೊಂಡಿದ್ದಾರೆ.
ಕಳೆದ ವರ್ಷ 98 ನಿಮಿಷಗಳ ಭಾಷಣ ಮಾಡಿ ದಾಖಲೆ ಬರೆದಿದ್ದ ಮೋದಿ, ಈ ಬಾರಿ 103 ನಿಮಿಷಗಳ ಕಾಲ ಮಾತನಾಡುವ ಮೂಲಕ ತಮ್ಮದೆ ದಾಖಲೆ ಮುರಿದಿದ್ದಾರೆ.
2024ರ ಮೊದಲು ಮೋದಿ ಅವರ ದೀರ್ಘ ಸ್ವಾತಂತ್ರ್ಯ ದಿನಾಚರಣೆಯ ಭಾಷಣ 2016ರಲ್ಲಿ ಆಗಿತ್ತು (96 ನಿಮಿಷಗಳು). 2017ರಲ್ಲಿ 56 ನಿಮಿಷಗಳ ಕಾಲ ಭಾಷಣ ಮಾಡಿದ್ದರು.
ಮೋದಿಗಿಂತ ಮೊದಲು, 1947ರಲ್ಲಿ ಜವಾಹರಲಾಲ್ ನೆಹರು 72 ನಿಮಿಷ ಮತ್ತು 1997ರಲ್ಲಿ ಐ.ಕೆ ಗುಜ್ರಾಲ್ 71 ನಿಮಿಷ ದೀರ್ಘ ಭಾಷಣ ಮಾಡಿದ್ದರು.
1954ರಲ್ಲಿ ನೆಹರೂ ಮತ್ತು 1966ರಲ್ಲಿ ಇಂದಿರಾ ಗಾಂಧಿ ಇಬ್ಬರೂ ಕ್ರಮವಾಗಿ 14 ನಿಮಿಷ ಮಾತನಾಡಿದ್ದರು. ಇದು ದಾಖಲೆಯ ಅತ್ಯಂತ ಕಡಿಮೆ ಅವಧಿಯ ಭಾಷಣವಾಗಿತ್ತು.
ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಕೂಡ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಅತ್ಯಂತ ಕಡಿಮೆ ಅವಧಿಯಲ್ಲಿ ಭಾಷಣ ಮುಗಿಸಿದ್ದರು.
2012 ಮತ್ತು 2013ರಲ್ಲಿ ಸಿಂಗ್ ಅವರ ಭಾಷಣಗಳು ಕ್ರಮವಾಗಿ 32 ಮತ್ತು 35 ನಿಮಿಷಗಳ ಕಾಲ ಮಾತ್ರ ನಡೆದಿತ್ತು. 2002 ಮತ್ತು 2003ರಲ್ಲಿ ವಾಜಪೇಯಿ ಅವರ ಭಾಷಣ ಇನ್ನೂ ಕಡಿಮೆ, ಅಂದರೆ 25 ಮತ್ತು 30 ನಿಮಿಷಗಳಿಗೆ ಅಂತ್ಯವಾಗಿತ್ತು.