ಅತ್ಯಾಚಾರ ಕೇಸಲ್ಲಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು – ಸಂತ್ರಸ್ತೆಗೆ 11 ಲಕ್ಷ ಪರಿಹಾರ

ರಾಜ್ಯ

ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಪ್ರಕರಣದಲ್ಲಿ ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅತ್ಯಾಚಾರ ಸಂತ್ರಸ್ತೆಗೆ 11 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶ ಹೊರಡಿಸಿದೆ.

ಪ್ರಕರಣದ ವಾದ-ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ವಿಶೇಷ (ಸೆಷನ್ಸ್) ನ್ಯಾಯಾಲಯವು, ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ತೀರ್ಪು ನೀಡಿತ್ತು. ಶಿಕ್ಷೆ ಪ್ರಮಾಣ ಶನಿವಾರ ಪ್ರಕಟಿಸಿದೆ. ನ್ಯಾ. ಗಜಾನನ ಭಟ್ ಅವರಿದ್ದ ಪೀಠವು, ಅಪರಾಧಿಗೆ ಜೀವನ ಪರ್ಯಂತ ಕಾರಾಗೃಹ ವಾಸ ಶಿಕ್ಷೆ ಪ್ರಕಟಿಸಿದೆ.

ಅಪರಾಧಿ ಪ್ರಜ್ವಲ್ ರೇವಣ್ಣಗೆ ಗರಿಷ್ಠ ಶಿಕ್ಷೆ ಜೊತೆ 2 ಸೆಕ್ಷನ್‌ಗಳಡಿ ತಲಾ 5 ಲಕ್ಷದಂತೆ ಒಟ್ಟು 10 ಲಕ್ಷ ರೂ. ದಂಡ ಕೂಡ ವಿಧಿಸಲಾಗಿದೆ. ಜೊತೆಗೆ ಸಂತ್ರಸ್ತೆಗೆ 11.25 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದೆ. ತೀರ್ಪಿನ ಪ್ರತಿಯನ್ನು ಅಪರಾಧಿಗೆ ಉಚಿತವಾಗಿ ನೀಡುವಂತೆ ಕೋರ್ಟ್‌ ತಿಳಿಸಿದೆ.

ಐಪಿಸಿ ಸೆಕ್ಷನ್ 376 (ಎನ್) ಅಡಿ ಜೀವನ ಅಂತ್ಯವಾಗುವವರೆಗೆ ಸಜೆ ವಿಧಿಸಲು ಅವಕಾಶವಿದೆ. ಅದೆ ಮಹಿಳೆಯನ್ನು ಪದೆ ಪದೆ ಅತ್ಯಾಚಾರ ಎಸಗಿದ್ರೆ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ.

ಏನಿದು ಪ್ರಕರಣ ?
2024ರ ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಚುನಾವಣೆಗೆ ಸ್ಪರ್ಧಿಸಿದ್ದ. ಇದೆ ಹೊತ್ತಿನಲ್ಲಿ ಸಂಸದ ಪ್ರಜ್ವಲ್‌ದು ಎನ್ನಲಾದ ಲೈಂಗಿಕ ದೌರ್ಜನ್ಯ ಕೃತ್ಯಗಳ ಹಲವು ವೀಡಿಯೋಗಳು ಮತ್ತು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಸಂಸದನ ಮನೆಯಲ್ಲೇ ಕೆಲಸ ಮಾಡಿಕೊಂಡಿದ್ದ 48 ವರ್ಷದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವೀಡಿಯೋ ಕೂಡ ಹರಿದಾಡಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆ ಕಣ್ಮರೆಯಾಗಿದ್ದರು. ಈ ಸಂಬಂಧ ಸಂತ್ರಸ್ತೆ ಪುತ್ರ 2024ರ ಮೇ 2 ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನನ್ನ ತಾಯಿಯನ್ನು ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಮತ್ತು ಅವರ ಸಂಬಂಧಿ ಕಿಡ್ನ್ಯಾಪ್ ಮಾಡಿದ್ದಾರೆಂದು ದೂರಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಎಸ್‌ಐಟಿ, ತೋಟದ ಮನೆಯೊಂದರಲ್ಲಿ ಸಂತ್ರಸ್ತೆ ಇರುವುದನ್ನು ಪತ್ತೆಹಚ್ಚಿತ್ತು. ವಿಚಾರಣೆ ವೇಳೆ, ತನ್ನ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಿದ್ದರು.

Leave a Reply

Your email address will not be published. Required fields are marked *