ವಾಡಿ: ಪಟ್ಟಣದ ಮೌಲಾನಾ ಅಬ್ದುಲ್ ಕಲಾಂ ಅಜಾದ್ ವೃತ್ತದಲ್ಲಿ ಬಿಜೆಪಿ ಪಕ್ಷದ ಮುಖಂಡರು ಶನಿವಾರ 26ನೇ ಕಾರ್ಗಿಲ್ ವಿಜಯ ದಿನಾಚರಣೆ ನಿಮಿತ್ಯ ರಾಷ್ಟ್ರ ಧ್ವಜದೊಂದಿಗೆ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಪ್ರತಿ ವರ್ಷ ಜು.26 ರಂದು ನಾವೆಲ್ಲರು ಸ್ಮರಿಸಿ, ಗೌರವಿಸಬೇಕಾದ ದಿನ. ಶತ್ರುರಾಷ್ಟ್ರ ದಾಳಿಯಿಂದ ಸದಾ ನಮ್ಮ ತಾಯ್ನಾಡಿನಲ್ಲಿ ನಾವುಗಳು, ಕೆಚ್ಚೆದೆಯ ನಮ್ಮ ವೀರಸೈನಿಕರ ತ್ಯಾಗ, ಬಲಿದಾನದ ಫಲವಾಗಿ ಇಂದು ಸುರಕ್ಷಿತವಾಗಿದ್ದೆವೆ ಎಂದರು.
ನಾವು ಕಾರ್ಗಿಲ್ ಯುದ್ಧವನ್ನು ಮರೆಯಲು ಸಾಧ್ಯವಿಲ್ಲ. ಈ ಯುದ್ಧದಲ್ಲಿ ನಮ್ಮ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ನಮ್ಮ ದೇಶದ ಘನತೆ, ಸಾಹಸವನ್ನು ಎತ್ತಿ ಹಿಡಿದಿದ್ದಾರೆ. ಅವರ ತ್ಯಾಗ, ಬಲಿದಾನ, ದೇಶಪ್ರೇಮ ಈ ಮಣ್ಣಿನಲ್ಲಿ ಹುಟ್ಟಿದವರೆಲ್ಲರಿಗೂ ಸ್ಫೂರ್ತಿ.
1999ರ ಮೇ ನಲ್ಲಿ ಪಾಕಿಸ್ತಾನಿ ಸೈನಿಕರು, ಉಗ್ರಗಾಮಿಗಳು ಕಾಶ್ಮೀರದ ಕಾರ್ಗಿಲ್ ಜಿಲ್ಲೆಗೆ ನುಸುಳಿದರು. ಪರಿಣಾಮ ಗಡಿಯಲ್ಲಿ ನಮ್ಮ ದೇಶದ ಹಾಗೂ ಪಾಕಿಸ್ತಾನ ಸೈನ್ಯದ ನಡುವೆ ಸಶಸ್ತ್ರ ಸಂಘರ್ಷ ಆರಂಭಗೊಂಡಿತ್ತು. ನಮ್ಮ ಭೂಪ್ರದೇಶದಿಂದ ಒಳನುಗ್ಗುವವರನ್ನು ಓಡಿಸಲು ನಮ್ಮ ಸೇನೆ ‘ಆಪರೇಷನ್ ವಿಜಯ್’ ಎಂಬ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿತು. ಸುಮಾರು ಎರಡು ತಿಂಗಳಿಗೂ ಅಧಿಕ ಕಾಲ ಈ ಯುದ್ಧ ಮುಂದುವರಿದಿತ್ತು. ಈ ಯುದ್ಧದಲ್ಲಿ ಶೌರ್ಯದಿಂದ ಹೋರಾಡಿದ್ದ ನಮ್ಮ ಯೋಧರು ಪಾಕಿಸ್ತಾದ ಸೈನ್ಯ ಹಾಗೂ ಉಗ್ರಗಾಮಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದರು. ಇದರ ಫಲವಾಗಿ ನಾವು ನಮ್ಮ ಭೂಪ್ರದೇಶದಲ್ಲಿ ಹಿಡಿತ ಸಾಧಿಸಿಕೊಂಡೆವು. ಕೊನೆಗೆ 1999ರ ಜುಲೈ 26ರಂದು ‘ಟೈಗರ್ ಹಿಲ್’ ವಶಪಡಿಸಿಕೊಳ್ಳುವುದರೊಂದಿಗೆ ಯುದ್ಧ ಕೊನೆಗೊಂಡಿತು. ಈ ಯುದ್ಧದಲ್ಲಿ ನಮ್ಮ ಸೈನಿಕರ ದಿಟ್ಟ ಹೋರಾಟದ ಫಲವಾಗಿ ಜಯ ಸಿಕ್ಕಿತು. ಅಂದು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಅದೆಷ್ಟೋ ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲಿ ಹೋರಾಡಿ ದೇಶದ ರಕ್ಷಣೆ ಮಾಡಿದ್ದರು. ಭಾರತ ಸೈನ್ಯ ಅಂದು ಸುಮಾರು 500ಕ್ಕಿಂತ ಹೆಚ್ಚು ಸಾಹಸಿಗಳನ್ನು ಕಳೆದುಕೊಂಡಿತ್ತು ಎಂದರು.
ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ,
ಎಸ್.ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಮುಖಂಡರಾದ ಶರಣಗೌಡ ಚಾಮನೂರ, ಹರಿಗಲಾಂಡೆ, ಮಲ್ಲಿಕಾರ್ಜುನ ಸಾತಖೇಡ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ, ಉಮಾಭಾಯಿ ಗೌಳಿ, ವಿಶ್ವರಾಧ್ಯ ತಳವಾರ, ದೇವೇಂದ್ರ ಬಡಿಗೇರ, ಅಂಬ್ರೇಷ ರಡ್ಡಿ, ಜಯಂತ ಪವಾರ, ಕುಮಾರ ಜಾಧವ, ಅಮಿತ ರಾಠೊಡ, ಬಾಳು ಪವಾರ,ಜ್ವಾಲ ಶರ್ಮಾ, ಶಿವಕುಮಾರ ಹೂಗಾರ, ದತ್ತಾ ಖೈರೆ, ಪ್ರೇಮ ತೆಲ್ಕರ, ಮಂಜುನಾಥ ಸ್ವಾಮಿ ಸೇರಿದಂತೆ ಅನೇಕರು ಪಾಲ್ಗೊಂಡು ವೀರಯೋಧರಿಗೆ ಜೈಘೋಷದೊಂದಿಗೆ ನಮಿಸಿ,ಪರಸ್ಪರ ಸಿಹಿ ಹಂಚಿ ಕಾರ್ಗಿಲ್ ವಿಜಯ ಆಚರಿಸಿದರು.