UPI ಬಳಕೆಯಲ್ಲಿ ಭಾರತ ಇಡಿ ಜಗತ್ತಿಗೆ ಮಾದರಿ: ಅಂತರರಾಷ್ಟ್ರೀಯ ಹಣಕಾಸು ನಿಧಿ ಶ್ಲಾಘನೆ

Uncategorized

ಭಾರತವು ತ್ವರಿತ ಪಾವತಿ ವ್ಯವಸ್ಥೆಯಲ್ಲಿ ಇಡಿ ಜಗತ್ತಿಗೆ ಮಾದರಿಯಾಗಿದ್ದು, ನಗದು ಬಳಕೆಯನ್ನು ಕಡಿಮೆ ಮಾಡುವಲ್ಲಿ ಮಹತ್ವದ ಯಶಸ್ಸು ಸಾಧಿಸಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮೆಚ್ಚುಗೆ ವ್ಯಕ್ತಪಡಿಸಿದೆ. ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಮೂಲಕ ಪ್ರತಿ ತಿಂಗಳು 18 ಶತಕೋಟಿ ವಹಿವಾಟುಗಳು ನಡೆಯುತ್ತಿವೆ.

ಇದರ ಪರಿಣಾಮವಾಗಿ ನಗದು ಬಳಕೆ ಗಣನೀಯವಾಗಿ ಕುಸಿತಕ್ಕೊಳಗಾಗಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸಲು ಸರ್ಕಾರ ಕೈಗೊಂಡ ಕ್ರಮಗಳು ಅತ್ಯಂತ ಯಶಸ್ವಿಯಾಗಿದ್ದು, ನಗದು ರಹಿತ ವಹಿವಾಟುಗಳಿಗೆ ಉತ್ತೇಜನ ನೀಡಿವೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ. ಅದಲ್ಲದೆ ನಗದು ಬಳಕೆಯ ಪ್ರಮಾಣವನ್ನು ಅಳೆಯಲು ಎಟಿಎಂಗಳಿಂದ ನಗದು ಹಿಂಪಡೆದುಕೊಳ್ಳುವಿಕೆ ಹಾಗೂ ವಹಿವಾಟಿನಲ್ಲಿ ಇರುವ ಕರೆನ್ಸಿಯ ಪ್ರಮಾಣವನ್ನು ಜಿಡಿಪಿ ಸಂಬಂಧಿತ ಪ್ರಮಾಣಗಳಾಗಿ ಬಳಸಲಾಗಿದೆ.

ಐಎಂಎಫ್ ಅಧ್ಯಯನದ ಪ್ರಕಾರ, ಚಿಲ್ಲರೆ ಪಾವತಿಯ ಹಿನ್ನಲೆಯಲ್ಲಿ ನಗದು, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಕೆಯ ಯುಗ ಮುಗಿಯುವ ಕಾಲ ಹತ್ತಿರದಲ್ಲಿದೆ. ಯುಪಿಐ ಇದೀಗ ಜಗತ್ತಿನಲ್ಲಿ ಮುಂಚೂಣಿ ಸ್ಥಾನವನ್ನು ಪಡೆದುಕೊಂಡಿದೆ. ಎಟಿಎಂಗಳ ಮೂಲಕ ಹಣವನ್ನು ಹಿಂತೆಗೆದುಕೊಳ್ಳುವ ಪ್ರಮಾಣವೂ ಕೂಡ ಕುಸಿತ ಕಂಡಿದೆ.

2016ರಲ್ಲಿ ಆರಂಭವಾದ ಯುಪಿಐ ವೇಗವಾಗಿ ಬೆಳವಣಿಗೆ ಕಂಡಿದ್ದು, ನಗದು ಬಳಕೆಯ ಕೆಲವು ಸೂಚಕಗಳು ಇತ್ತೀಚೆಗೆ ಕುಗ್ಗತೊಡಗಿವೆ. ಪ್ರಸ್ತುತ ಯುಪಿಐ ಮಾಸಕ್ಕೆ 18 ಬಿಲಿಯನ್‌ಕ್ಕಿಂತ ಅಧಿಕ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುತ್ತಿದ್ದು, ಭಾರತದಲ್ಲಿ ಇತರ ಯಾವುದೆ ಎಲೆಕ್ಟ್ರಾನಿಕ್ ಚಿಲ್ಲರೆ ಪಾವತಿಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿ ಪರಿಣಮಿಸಿದೆ. ಇತ್ತೀಚೆಗೆ ಭಾರತವು ಜಗತ್ತಿನ ಯಾವುದೆ ದೇಶಕ್ಕಿಂತ ವೇಗವಾಗಿ ಪಾವತಿಗಳನ್ನು ನಡೆಸುತ್ತಿರುವುದನ್ನು ನಾವು ನೋಡುತ್ತೆವೆ ‌ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ಮೊಬೈಲ್ ಫೋನ್ ಮೂಲಕ ಅಂತರ ಬ್ಯಾಂಕ್ ವಹಿವಾಟುಗಳನ್ನು ಸುಗಮಗೊಳಿಸುವ ಈ ಪ್ಲಾಟ್‌ಫಾರ್ಮ್ ಬಹಳ ವೇಗವಾಗಿ ಜನಪ್ರಿಯವಾಗಿದೆ, ನಗದು ಬಳಕೆಯನ್ನು ಲಘುವಾಗಿ ಕಡಿಮೆ ಮಾಡಿದೆ. ನಗದು ವಹಿವಾಟುಗಳು ಅನಾಮಧೇಯವಾಗಿದ್ದು, ಲೆಡ್ಜರ್‌ಗಳಲ್ಲಿ ದಾಖಲೆಯಾಗುವುದಿಲ್ಲ, ಇದರಿಂದ ಅವುಗಳನ್ನು ಪತ್ತೆ ಹಚ್ಚುವುದು ಕಷ್ಟಕರವಾಗುತ್ತದೆ. ವಿಶೇಷವಾಗಿ ಅನೌಪಚಾರಿಕ ವಲಯದಲ್ಲಿ ನಗದು ಬಳಕೆ ಅಪಾರವಾಗಿದ್ದು, ಅದನ್ನು ಕಡಿಮೆ ಮಾಡಲು ಸರ್ಕಾರ ಡಿಜಿಟಲ್ ಪಾವತಿ ವ್ಯವಸ್ಥೆಗೆ ಪ್ರೋತ್ಸಾಹ ನೀಡುತ್ತಿದೆ. ಐಎಂಎಫ್ ಅಧ್ಯಯನದ ಪ್ರಕಾರ, ಪರಸ್ಪರ ಕಾರ್ಯಸಾಧ್ಯತೆ ಡಿಜಿಟಲ್ ಪಾವತಿಗಳನ್ನು ಹೆಚ್ಚು people adopt ಮಾಡಲು ಸಹಕಾರಿಯಾಗುತ್ತಿದೆ ಮತ್ತು ನಗದುರಹಿತ ಆರ್ಥಿಕತೆಯ ಕಡೆಗೆ ಸಾಗಲು ಉತ್ತೇಜನ ನೀಡುತ್ತಿದೆ ಎಂದು ಸೂಚಿಸಿದೆ.

ಈ ಪಾವತಿ ವ್ಯವಸ್ಥೆ ಈಗ 600ಕ್ಕೂ ಹೆಚ್ಚು ಬ್ಯಾಂಕುಗಳು ಮತ್ತು ಸುಮಾರು 200ಕ್ಕೂ ಅಧಿಕ ಆಪ್‌ಗಳಿಗೆ ವ್ಯಾಪಿಸಿರುವಷ್ಟು ವ್ಯಾಪಕವಾಗಿದೆ. ಯುಪಿಐ ಆರಂಭದ ದಿನಗಳಲ್ಲಿ, ಬಳಕೆದಾರರ ಬಹುಪಾಲು ತಮ್ಮ ಸ್ವಂತ ಬ್ಯಾಂಕುಗಳ ಅಪ್ಲಿಕೇಶನ್‌ಗಳ ಮೂಲಕ ವಹಿವಾಟು ನಡೆಸುತ್ತಿದ್ದರು. ಆದರೆ ಕಾಲಕ್ರಮೇಣ ಜನರು ಬ್ಯಾಂಕ್ ಆಪ್‌ಗಳಿಂದ ವಿಭಿನ್ನ ಯುಪಿಐ ಆಪ್‌ಗಳಿಗೆ ಸಾಗುತ್ತಿದ್ದಾರೆ. ಇದರ ಹಿಂದೆ ಉತ್ತಮ ಬಳಕೆದಾರ ಅನುಭವ ಮತ್ತು ಪರಸ್ಪರ ಕಾರ್ಯಸಾಧ್ಯತೆ ಒದಗಿಸುವ ಸ್ವಾತಂತ್ರ್ಯ ಮುಖ್ಯ ಕಾರಣವಾಗಿರಬಹುದು ಎಂದು ಅಧ್ಯಯನ ತಿಳಿಸಿದೆ.

ಇಂದು, ಯುಪಿಐ ಆಪ್‌ಗಳು ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಖಾಸಗಿ ಬ್ಯಾಂಕುಗಳ ಗ್ರಾಹಕರ ಪ್ರಮಾಣವು ಹೆಚ್ಚಾಗುತ್ತಿದ್ದು, ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗಿಂತ ಹೆಚ್ಚು ಜನರು ಖಾಸಗಿ ಬ್ಯಾಂಕುಗಳನ್ನು ಆಯ್ಕೆ ಮಾಡುತ್ತಿರುವುದಾಗಿ ಅಧ್ಯಯನ ವರದಿ ಹೇಳುತ್ತದೆ.

ಮುನ್ನೆಚ್ಚರಿಕೆ ಅಗತ್ಯ

ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದ್ದು, ಚಿಲ್ಲರೆ ವ್ಯಾಪಾರಕ್ಕೂ ಪಸರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮುಕ್ತ, ಪಾರದರ್ಶಕ, ನ್ಯಾಯಸಮ್ಮತ ಹಾಗೂ ಸ್ಪರ್ಧಾತ್ಮಕ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಕ್ಷೇತ್ರದ ಆತಂಕಗಳು ಮತ್ತು ಸಂಭಾವ್ಯ ಅಪಾಯಗಳತ್ತ ನಿಗಾ ವಹಿಸಬೇಕೆಂದು ಅಧ್ಯಯನವನ್ನು ಸಿದ್ಧಪಡಿಸಿದ ಅಲೆಕ್ಸಾಂಡರ್ ಕೊಪೆಸ್ಟೇಕ್, ದಿವ್ಯಾ ಕಿರ್ಟಿ ಹಾಗೂ ಮಾರಿಯಾ ಸೆಲೊಡಡ್ ಮಾರ್ಟಿನಿಫ್ ಸಲಹೆ ನೀಡಿದ್ದಾರೆ.

ವಿದೇಶಗಳಲ್ಲೂ ಯುಪಿಐ ಸೇವೆ

ಈಗ ಭಾರತದ ಯುಪಿಐ ವ್ಯವಸ್ಥೆ ಫ್ರಾನ್ಸ್, ಭೂತಾನ್, ನೇಪಾಳ, ಶ್ರೀಲಂಕಾ, ಮಾರಿಷಸ್, ಕತಾರ್ ಮತ್ತು ಸಿಂಗಾಪುರದಂತಹ ದೇಶಗಳಲ್ಲಿಯೂ ಬಳಸಲಾಗುತ್ತಿದೆ.

40 ಲಕ್ಷ ರೂ. ಮೀರುವ ವಹಿವಾಟುಗಳಿಗೆ ನೋಟಿಸ್

ಒಂದು ವರ್ಷದೊಳಗೆ 40 ಲಕ್ಷ ರೂ.ಗೆ ಮೇಲ್ಪಟ್ಟ ವಹಿವಾಟು ನಡೆಸಿದವರಲ್ಲಿ ಜಿಎಸ್‌ಟಿ ನೋಂದಣಿ ಮಾಡದೆ ತೆರಿಗೆ ಪಾವತಿಸದವರಿಗೆ ಮಾತ್ರ ನೋಟಿಸ್ ನೀಡಲಾಗಿದೆ. ಅಧಿಕ ಮೊತ್ತದ ವಹಿವಾಟು ನಡೆಸುವವರು ತಕ್ಷಣವೆ ಜಿಎಸ್‌ಟಿಗೆ ನೋಂದಾಯಿಸಿ ತೆರಿಗೆ ಪಾವತಿಸಬೇಕೆಂದು ವಾಣಿಜ್ಯ ತೆರಿಗೆ ಇಲಾಖೆ ಸೂಚಿಸಿದೆ.

ಇತ್ತೀಚೆಗೆ, ಸಣ್ಣ ಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗುತ್ತಿದೆ ಎಂಬ ಸುದ್ದಿ ಹರಿದಾಡಿದ್ದು, ಅದನ್ನು ಖಂಡಿಸಿದ ವಾಣಿಜ್ಯ ತೆರಿಗೆ ಇಲಾಖೆ, 2017ರ ಜುಲೈನಿಂದಲೇ ಜಿಎಸ್‌ಟಿ ಕಾಯಿದೆ ಜಾರಿಗೆ ಬಂದಿರುವುದಾಗಿ ಸ್ಪಷ್ಟಪಡಿಸಿದೆ. ಅದರಂತೆ ವಾರ್ಷಿಕ 40 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರು ಜಿಎಸ್‌ಟಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. 2021ರಿಂದ 2025ರವರೆಗೆ ಯುಪಿಐ ಮೂಲಕ ಹಣದ ವಹಿವಾಟು ನಡೆಸಿದ ಪೂರೈಕೆದಾರರ ಮಾಹಿತಿ ಸಂಗ್ರಹಿಸಲಾಗಿದೆ. ಆ ಆಧಾರದಲ್ಲಿ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ವಾರ್ಷಿಕ ವಹಿವಾಟು 1.5 ಕೋಟಿ ರೂ.ಗಿಂತ ಕಡಿಮೆ ಇರುವ ಸಣ್ಣ ವ್ಯಾಪಾರಿಗಳು ಕಂಪೊಸಿಷನ್ ಯೋಜನೆಯನ್ನು ಆಯ್ಕೆ ಮಾಡಿಕೊಂಡು ಶೇ. 1ರಷ್ಟು ತೆರಿಗೆ ಪಾವತಿಸಬಹುದು.

Leave a Reply

Your email address will not be published. Required fields are marked *