ಅನಾಮಧೇಯ ಭಕ್ತನಿಂದ ಶಿರಡಿ ಸನ್ನಿಧಿಗೆ 59 ಲಕ್ಷದ ಚಿನ್ನದ ಕಿರೀಟ ಸೇರಿ 65 ಲಕ್ಷ ಮೌಲ್ಯದ ಆಭರಣ ದಾನ

ರಾಷ್ಟೀಯ

ಮುಂಬೈ: ಗುರುಪೂರ್ಣಿಮೆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಅನಾಮಧೇಯ ಭಕ್ತರೊಬ್ಬರು 59 ಲಕ್ಷದ ಚಿನ್ನದ ಕಿರೀಟ ಸೇರಿದಂತೆ 65 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದಾನವಾಗಿ ನೀಡಿದ್ದು, ಬಾಬಾ ಕೃಪೆಗೆ ಪಾತ್ರರಾಗಿದ್ದಾರೆ.

ದೇಣಿಗೆ ನೀಡಲಾದ 65 ಲಕ್ಷ ರೂ. ಮೌಲ್ಯದ ಆರಭರಣಗಳ ಪೈಕಿ 566 ಗ್ರಾಂ ತೂಕದ 59 ಲಕ್ಷ ಮೌಲ್ಯದ ಚಿನ್ನದ ಕಿರೀಟ, 54 ಗ್ರಾಂ ತೂಕದ ಚಿನ್ನದ ಹೂವುಗಳು (ಆಭರಣ), 2 ಕೆಜಿ ತೂಕದ ಬೆಳ್ಳಿಯ ಹಾರ ಸೇರಿವೆ. ಆಭರಣವನ್ನು ಬಾಬಾಗೆ ಅರ್ಪಿಸುವಾಗ ಭಕ್ತರು ತಮ್ಮ ಹೆಸರು ಅಥವಾ ವಿಳಾಸ ಬಹಿರಂಗಪಡಿಸಿಲ್ಲ ಎಂದು ವರದಿಗಳು ತಿಳಿಸಿವೆ.

ಭಕ್ತರು ಕಾಣಿಕೆ ನೀಡಿರುವ ಬಗ್ಗೆ ಮಾತನಾಡಿರುವ ಶಿರಡಿ ಸಾಯಿ ಟ್ರಸ್ಟ್‌ನ ಸಿಇಒ ಗೋರಕ್ಷ ಗಾಡಿಲ್ಕರ್, ಇದು ಕೇವಲ ಹಣಕಾಸಿನ ದೃಷ್ಟಿಯಿಂದ ಅಮೂಲ್ಯವಾದ ದೇಣಿಗೆಯಾಗಿರದೆ, ಆಳವಾದ ಭಕ್ತಿ ಮತ್ತು ಭಕ್ತಿಯ ಸಂಕೇತವಾಗಿದೆ. ಜೊತೆಗೆ ಸಾಯಿ ಬಾಬಾ ಭಕ್ತನ ಹೃದಯದಿಂದ ಮೂಡಿದ ಭಕ್ತಿ ಮತ್ತು ಕೃತಜ್ಞತೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ್ದಾರೆ.

ಶಿರಡಿ ಸಾಯಿಬಾಬಾ ದೇವಾಲಯದಲ್ಲಿ 1908 ರಿಂದಲೂ ಗುರು ಪೂರ್ಣಿಮೆ ಆಚರಿಸಲಾಗುತ್ತಿದೆ. ಪ್ರತಿ ವರ್ಷವೂ ದೇಶಾದ್ಯಂತ ಹಾಗೂ ವಿದೇಶಿ ಭಕ್ತರಿಂದ ಹತ್ತಾರು ಕೊಡುಗೆಗಳು ದೇವಸ್ಥಾನಕ್ಕೆ ಹರಿದು ಬರುತ್ತದೆ. ಈ ಬಾರಿ 61 ದೇಶಗಳಿಂದ ವಿದೇಶಿಯರು ಪ್ರಾರ್ಥನೆ ಸಲ್ಲಿಸಲು ಬಂದಿದ್ದಾರೆ ಎಂದು ವಿವರಿಸಿದ್ದಾರೆ.

ವ್ಯಾಸ ಪೂರ್ಣಿಮೆ ಎಂದು ಕರೆಯಲ್ಪಡುವ ಗುರು ಪೂರ್ಣಿಮೆಯನ್ನು ಭಾರತ, ನೇಪಾಳ, ಭೂತಾನ್ ಮತ್ತು ಇತರ ಹಲವು ದೇಶಗಳಲ್ಲಿ ಹಿಂದೂ, ಬೌದ್ಧ ಮತ್ತು ಜೈನ ಸಮುದಾಯಗಳಲ್ಲಿ ಆಚರಿಸಲಾಗುತ್ತದೆ. ಇದು ಮಹರ್ಷಿ ವೇದ ವ್ಯಾಸರ ಜನ್ಮವನ್ನು ಸ್ಮರಿಸುತ್ತದೆ.

Leave a Reply

Your email address will not be published. Required fields are marked *