ಚಿತ್ತಾಪುರ: ಸರ್ಕಾರಿ ಕಚೇರಿಗಳು ಜನಸ್ನೇಹಿಯಾಗಿರಬೇಕು. ಅಂದಾಗ ಮಾತ್ರ ಒಳ್ಳೆಯ ಆಡಳಿತ ಕೊಡಲು ಸಾಧ್ಯವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ 18.41 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಪ್ರಜಾಸೌಧ ಕಟ್ಟಡ ಮತ್ತು ವಿವಿಧ ಯೋಜನೆಗಳಡಿ 517 ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾಡಿದ ಅವರು, ಈ ಹಿಂದೆ ಮಿನಿ ವಿಧಾನಸೌಧ ಎಂದು ಕರೆಯುತ್ತಿದ್ದ ಕಟ್ಟಡಗಳಿಗೆ ಈಗ ಪ್ರಜಾ ಸೌಧ ಎಂದು ಹೆಸರಿಸಲಾಗುತ್ತಿದೆ. ಕಾರಣ ಆಡಳಿತ ಜನರಿಗೆ ಹತ್ತಿರವಾಗಬೇಕು. ಕೆಲಸಗಳು ನಿರಾಂತಕವಾಗಿ ನಡೆಯಬೇಕು ಎನ್ನುವ ಉದ್ದೇಶವಾಗಿದೆ ಎಂದರು.
ಮುಂದಿನ ಮೂರು ವಾರದಲ್ಲಿ ಸಮೃದ್ಧಿ ಯೋಜನೆಯಡಿ 150 ಕೋಟಿ ರೂ ಅನುದಾನವನ್ನು ಚಿತ್ತಾಪುರದ ಮತಕ್ಷೇತ್ರಕ್ಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು, ರಾಜ್ಯದಲ್ಲಿ ಕಂದಾಯ ಇಲಾಖೆಯಲ್ಲಿ ಅಮುಲಾಗ್ರ ಬದಲಾವಣೆ ತರಲಾಗಿದೆ. ಅದೆ ರೀತಿ ಜಿಲ್ಲೆಯಲ್ಲಿಯೂ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಾರ್ವಜನಿಕರಿಗೆ ತ್ವರಿತಗತಿಯಾಗಿ ಒದಗಿಸಲಾಗುತ್ತಿದೆ ಎಂದರು.
ಜುಲೈ ಅಂತ್ಯದ ವರೆಗೆ ಅಥವಾ ಅಗಸ್ಟ್ ಮೊದಲ ವಾರದಲ್ಲಿ ಗ್ರಾಮೀಣ ಮಟ್ಟದ ಅಕ್ರಮ ಜಾಗಗಳನ್ನು ಸಕ್ರಮ ಮಾಡಿ ಇ ಸ್ವತ್ತು ದಾಖಲೆ ಒದಗಿಸಲಾಗುವುದು, ಕಕ ಭಾಗಕ್ಕೆ ಆರ್ಟಿಕಲ್ 371(J) ಜಾರಿಗೆ ಬಂದ ನಂತರ ಈ ಭಾಗದ ಅಭಿವೃದ್ದಿಗೆ ಸಹಕಾರಿಯಾಗಿದೆ. ಪ್ರತಿವರ್ಷ 5 ಸಾವಿರ ಕೋಟಿ ರೂ ಅನುದಾನ ಮಂಡಳಿಗೆ ಬರುತ್ತಿದೆ. ಕಳೆದ ಒಂದು ದಶಕದಲ್ಲಿ 30 ಸಾವಿರ ಕಾಮಗಾರಿಗಳು ನಡೆದಿವೆ. 6,795 ಮೆಡಿಕಲ್ ಹಾಗೂ 22,219 ಇಂಜಿನೀಯರಿಂಗ್ ಸೀಟುಗಳು ಆರ್ಟಿಕಲ್ 371(J) ಅಡಿಯಲ್ಲಿ ದೊರಕಿದರೆ, ಇದುವರೆಗೆ 1.10 ಲಕ್ಷ ಜನರಿಗೆ ನೌಕರಿ ಮತ್ತು 37,600 ನೌಕರರಿಗೆ ಪ್ರಮೋಷನ್ ಸಿಕ್ಕಿದೆ ಎಂದರು.
ಮನ್ ಕೀ ಬಾತ್ ನಲ್ಲಿ ಮಾತನಾಡಿದ ಪ್ರಧಾನಿಗಳು ಕಲಬುರಗಿ ರೊಟ್ಟಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಮಹಿಳೆಯರಿಗೆ ಸ್ವಾವಲಂಬಿ ಜೀವನದ ಬಗ್ಗೆ ಕೊಂಡಾಡಿದ್ದಾರೆ. ಆದರೆ ಅನುದಾನ ಬಿಡುಗಡೆ ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಇತ್ತೀಚಿಗೆ ಬಿಜೆಪಿಯ ನಾಯಕರು ಪದೆ ಪದೆ ಕಲಬುರಗಿಗೆ ಬರುತ್ತಿದ್ದಾರೆ ಕಾರಣ ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಲು ಬರುತ್ತಿದ್ದಾರೆ ಎಂದರು.
ವಿಜಯೇಂದ್ರ ಸ್ಥಳೀಯ ನಾಯಕರನ್ನು ನಂಬಿಕೊಂಡು ರಾಜಕೀಯ ಮಾಡಲು ಆಗುವುದಿಲ್ಲ. ಅದನ್ನು ನಾನು ಅವರಿಗೆ ನೇರವಾಗಿ ಹೇಳಿದ್ದೆನೆ. ಇಲ್ಲಿನ ಒಬ್ಬ ವ್ಯಕ್ತಿಯನ್ನು ನಂಬಿ ಅವರು ಬಂದಿದ್ದರು. ಈಗ ಆ ವ್ಯಕ್ತಿ ಎಲ್ಲಿದ್ದಾನೊ ಗೊತ್ತಿಲ್ಲ. ಹೆಣದ ಮೇಲೆ ಬಿಜೆಪಿಯವರು ರಾಜಕೀಯ ಮಾಡುತ್ತಾರೆ. ಬೀದರ್ ನಲ್ಲಿ ಯುವಕನೋರ್ವನ ಸಾವಿನ ವಿಚಾರದಲ್ಲಿ ರಾಜಕೀಯ ಮಾಡಿದ್ದರು. ಮಂಗಳೂರು ಹಾಗೂ ಕರಾವಳಿ ಭಾಗವನ್ನು ಪ್ರಯೋಗ ಶಾಲೆ ಮಾಡಿದಂತೆ ನಮ್ಮ ಭಾಗದಲ್ಲಿ ಮಾಡಲು ಸಾಧ್ಯವಿಲ್ಲ. ಇದು ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿ ಬಿಜೆಪಿಯವರ ಯಾವ ಪ್ರಯೋಗ ನಡೆಯುವುದಿಲ್ಲ. ವಾಡಿಯಲ್ಲಿ ನಡೆದ ಒಂದು ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಜಗಳವಾದರೆ ವಿರೋಧ ಪಕ್ಷದ ನಾಯಕರು ಬರುತ್ತಾರೆ ಎಂದರೆ ಅವರ ಭೌದ್ದಿಕ ದಿವಾಳಿತನ ತೋರಿಸುತ್ತದೆ ಎಂದರು.
ಸಂವಿಧಾನದ ಪ್ರಕಾರ ಪ್ರತಿಭಟನೆ ಮಾಡಲು ಅವಕಾಶವಿದೆ. ರಿಪಬ್ಲಿಕ್ ಆಪ್ ಕಲಬುರಗಿ ಇದ್ದರೆ ನಾವು ಪ್ರತಿಭಟನೆ ಮಾಡಲು ಬಿಡುತ್ತಿರಲಿಲ್ಲ. ಬಿಜೆಪಿ ಪ್ರತಿಭಟನೆಗೆ ಹತ್ತು ಜನ ಇರುತ್ತಾರೆ. ಸರ್ಕಾರದ ಲೋಪಗಳಿದ್ದರೆ ಟೀಕೆ ಮಾಡಲಿ ತಪ್ಪಿದ್ದರೆ ತಿದ್ದಿಕೊಳ್ಳುತ್ತೆವೆ. ಅದು ಬಿಟ್ಟು ಟೀಕೆ ಮಾಡಬೇಕು ಎಂದು ಟೀಕೆ ಮಾಡಬೇಡಿ ಎಂದರು.
ಮುಂದಿನ ಮೂರು ವರ್ಷದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ನೀಲಿ ನಕ್ಷೆ ತಯಾರಿಸಲಾಗಿದೆ. ಕಲಬುರಗಿ ಹಾಗೂ ಚಿತ್ತಾಪುರ ಮತ್ತು ವಾಡಿ ಪಟ್ಟಣ ಅಭಿವೃದ್ದಿಗೆ ಖಾಸಗಿ ಸಂಸ್ಥೆಯೊಂದಿಗೆ ಮಾತುಕತೆ ನಡದಿದೆ. ಇದಕ್ಕೆ ಸಂಸದರ ಆಶೀರ್ವಾದ ಬೇಕಾಗುತ್ತದೆ. ವಾಡಿ ಹಾಗೂ ಚಿತ್ತಾಪುರ ಅಭಿವೃದ್ದಿಗೆ ತಲಾ100 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ವೇದಿಕೆಯ ಮೇಲಿದ್ದ ಅದಾನಿ ಸಿಮೆಂಟ್ಸ್ ಕಂಪನಿಯ ಅಧಿಕಾರಿಗಳಿಗೆ ಮನವಿ ಮಾಡಿದರು.
MLC ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ಚಿತ್ತಾಪುರದ ಪ್ರಜಾಸೌಧ ಬೆಂಗಳೂರಿನ ವಿಧಾನಸೌಧದಂತೆ ಕಾಣುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಎಂ.ವೈ ಪಾಟೀಲ ಮಾತನಾಡಿ, ಅಫಜಲಪುರ ಪಟ್ಟಣಕ್ಕೆ 120 ಕೋಟಿ ರೂ ವೆಚ್ಚದ ಕುಡಿಯುವ ನೀರಿನ ಯೋಜನೆ ಮಂಜೂರಾತಿಗಾಗಿ ಸಚಿವರ ಕೊಡುಗೆ ಬಹಳಷ್ಟಿದೆ ಎಂದರು.
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾತನಾಡಿ, ಹಲವಾರು ಕಾನೂನು ತೊಡಕುಗಳನ್ನು ನಿವಾರಿಸಿದ ನಂತರ ಪ್ರಜಾಸೌಧ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಂದಾಯ ದಾಖಲೆಗಳು ಡಿಜಿಟಲ್ ಮಾಡಲಾಗಿದ್ದು ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗಲಿದೆ. ದರ್ಖಾಸ್ತು ಪೋಡಿ ಮಾಡುವ ಮೂಲಕ ದಾಖಲಾತಿಗಳನ್ನು ಒದಗಿಸಲು ಅನುಕೂಲವಾಗುತ್ತದೆ. ಪೋಡಿ ಮುಕ್ತ ಗ್ರಾಮಗಳನ್ನಾಗಿ ಮಾಡುವತ್ತು ಕ್ರಮವಹಿಸಲಾಗಿದೆ. ಪಾವತಿ ಖಾತಾ ಆಂದೋಲನಕ್ಕೂ ಕೂಡಾ ಚಾಲನೆ ನೀಡಲಾಗಿದೆ. ಇದಕ್ಕೆ ಆ್ಯಪ್ ಮಾಡಲಾಗಿದ್ದು ಗ್ರಾಮ ಲೆಕ್ಕಾಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ ಅಲ್ಲಿಂದಲೇ ದಾಖಲಾತಿಗಳನ್ನು ಅಪ್ ಲೋಡ್ ಮಾಡುತ್ತಾರೆ ಇದಕ್ಕೆ ತಹಸೀಲ್ದಾರ ಕಚೇರಿಗೆ ತಲುಪಿದ ನಂತರ ಪಾವ್ತಿ ಖಾತಗಳಾಗುತ್ತವೆ. ಟಿಪ್ಪಣಿ ಮಿಸ್ಸಿಂಗ್ ಆಗಿರುವ ಬಗ್ಗೆ ದೂರುಗಳಿದ್ದವು ಅಂತಹ 500 ಮಿಸ್ಸಿಂಗ್ ಟಿಪ್ಪಣಿಗಳನ್ನು ಸರಿಪಡಿಸಲಾಗಿದೆ. ಆನ್ಲೈನ್ ನಲ್ಲೆ ಪಹಣಿ ದೊರಕಿಸಿಕೊಡಲು ಪ್ರಯತ್ನ ನಡೆದಿದೆ. ಏಳು ವಿವಿಧ ರೀತಿಯ ಪಿಂಚಣಿಗಳನ್ನು ಸರಿಯಾಗಿ ಫಲಾನಿಭವಿಗಳಿಗೆ ದೊರಕಿಸಿಕೊಡಲಾಗುತ್ತಿದೆ. ರೋವರ್ ಯಂತ್ರ ಬಳಕೆ ಮಾಡಿ ಜಮೀನಿಗಳ ಸರ್ವೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಇದೆ ಸಂದರ್ಭದಲ್ಲಿ ಸಚಿವರು ಹಾಗೂ ಗಣ್ಯರು 517 ಫಲಾನುಭವಿಗಳಿಗೆ ಸೌಲಭ್ಯ ಪತ್ರಗಳು ನೀಡಲಾಯಿತು.
ವೇದಿಕೆಯ ಮೇಲೆ ಸಂಸದ ರಾಧಾಕೃಷ್ಣ ದೊಡ್ಡಮನಿ, ಎಂಎಲ್’ಸಿ ಜಗದೇವ ಗುತ್ತೇದಾರ, ಮಾಜಿ ಶಾಸಕ ಬಾಬುರಾವ್ ಚಿಂಚನಸೂರು, ಸಿಇಒ ಭಂವರ್ ಸಿಂಗ್ ಮೀನಾ, ಎಸ್’ಪಿ ಅಡ್ಡೂರು ಶ್ರೀನಿವಾಸಲು, ಎಸಿ ಪ್ರಭುರೆಡ್ಡಿ, ಮುಖಂಡರಾದ ದೇವೆಂದ್ರಪ್ಪ ಮರತೂರು, ಅನ್ನಪೂರ್ಣ ನಾಗಪ್ಪ ಕಲ್ಲಕ್, ರಮೇಶ್ ಮರಗೋಳ, ಶಿವಾನಂದ ಪಾಟೀಲ, ನಾಗರೆಡ್ಡಿ ಕರದಾಳ, ಭೀಮಣ್ಣ ಸಾಲಿ, ಶ್ರೀನಿವಾಸ ಸಗರ, ಮಹೇಮೂದ್ ಸಾಹೇಬ್, ಅಜೀಜ್ ಸೇಠ ರಾವೂರ ಸೇರಿದಂತೆ ಅನೇಕರು ಇದ್ದರು.
ಪ್ರಜಾ ಸೌಧ ಕಟ್ಟಡದ ವಿವರ
- ಜಮೀನಿನ ವಿವರ: ಕಲಬುರಗಿ ಜಿಲ್ಲೆ ಚಿತ್ತಾಪುರ ಸ.ನಂ.125/ಪಿ.2 ರಲ್ಲಿ 3ಎ-14
- ಒಟ್ಟು ಕಟ್ಟಡ ವಿಸ್ತೀರ್ಣ: 4,511. ಚದರ ಮೀ. /48,538. ಚದರ ಅಡಿ.
ಅನುಷ್ಠಾನ ಸಂಸ್ಥೆ/ಇಲಾಖೆ: ಕರ್ನಾಟಕ ಗೃಹ ಮಂಡಳಿ
- ಅನುಮೋದಿತ ಯೋಜನಾ ಮೊತ್ತ: 1 ಸಾವಿರ ಲಕ್ಷ (10 ಕೋಟಿ)
- ಗುತ್ತಿಗೆ ಮೊತ್ತ / ಎಂಟ್ರಸ್ಟಮೆಂಟ್ ಮೊತ್ತ: ರೂ. 915.39 ಲಕ್ಷಗಳು (9 ಕೋಟಿ 15
- ಗುತ್ತಿಗೆದಾರರು: ಮೆ//ಕೆ.ಎಮ್.ವಿ ಪ್ರಾಜೆಕ್ಟ್ ಬೆಂಗಳೂರು
- ವಾಸ್ತುಶಿಲ್ಪಿಗಳು: ಮೆ// SAMA ಆರ್ಕಿಟೆಕ್ಟ್ ಬೆಂಗಳೂರು
- ಪಿಎಮ್’ಸಿ: ಮೆ//ಕೆ.ಟಿ.ಎಚ್ ಬೆಂಗಳೂರು
ಕಚೇರಿಗಳ ಪಟ್ಟಿ
ನೆಲ ಮಹಡಿ
ಉಪನೊಂದಣಾಧಿಕಾರಿಗಳ ಕಛೇರಿ, ಪತ್ರಾಂಕಿತ ಉಪ ಖಜಾನೆ ಕಛೇರಿ, ತಹಶೀಲ್ದಾರ ಗ್ರೇಡ್-2 ಕಛೇರಿ, ಅಟಲ್ ಜೀ ಜನಸ್ನೇಹಿ ಕೇಂದ್ರ, ಭೂಮಿ ಕೇಂದ್ರ, ಅಧಾರ್ ಕೇಂದ್ರ, ಸಹಾಯಕ ನಿರ್ದೇಶಕರು-ಭೂ ದಾಖಲೆಗಳ ಇಲಾಖೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ.
1ನೇ ಮಹಡಿ
ತಹಶೀಲ್ದಾರರು ಮತ್ತು ತಾಲೂಕು ದಂಡಾಧಿಕಾರಿಗಳ ಕಛೇರಿ, ತಾಲೂಕು ಆಡಳಿತ ಸಭಾಂಗಣ, ತಹಶೀಲ್ದಾರ ಕಛೇರಿಯ ಸಿಬ್ಬಂದಿಗಳು ಮತ್ತು ಭೂ ದಾಖಲೆಗಳ ಕೋಣೆ, ಚುನಾವಣೆ ಶಾಖೆ, ವಿಡಿಯೋ ಸಂವಾದ ಕೇಂದ್ರ, ಸಹಾಯಕ ನಿರ್ದೇಶಕರು-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ.
2ನೇ ಮಹಡಿ
ಶಾಸಕರು, ವಿಧಾನಸಭಾ ಕ್ಷೇತ್ರ ಕಛೇರಿ ಚಿತ್ತಾಪುರ, ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಉದ್ಯೋಗ ಮತ್ತು ತರಬೇತಿ ಇಲಾಖೆ, ಹಿರಿಯ ಸಹಾಯಕ ನಿರ್ದೇಶಕರು-ತೋಟಗಾರಿಕೆ ಇಲಾಖೆ, ಸಹಾಯಕ ನಿರ್ದೇಶಕರು- ಕೃಷಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ.