ಅಹಮದಾಬಾದ್‌ ವಿಮಾನ ಪತನ: ಮೊಬೈಲ್​ನಲ್ಲಿ ವಿಡಿಯೋ ಸೆರೆಹಿಡಿದ ಹುಡುಗನಿಗೆ ಶುರುವಾಗಿದೆ ಭಯ

ರಾಷ್ಟೀಯ

ಅಹಮದಾಬಾದ್‌: ಟೇಕಾಫ್​ ಆದ ಕೆಲವೇ ಸೆಕೆಂಡ್​ಗಳಲ್ಲಿ ಅಹಮದಾಬಾದ್‌ ವಿಮಾನ ನಿಲ್ದಾಣದ ಬಳಿ ಏರ್’ಇಂಡಿಯಾ ಪತನಗೊಂಡ ಸುದ್ದಿ ಎಲ್ಲರಿಗೂ ತಿಳಿದಿದೆ. ಈ ದುರಂತ ನೆನೆಪು ಮಾಡಿಕೊಂಡರೆ ಈ ಕ್ಷಣವೂ ಕಣ್ತುಂಬಿಕೊಳ್ಳುತ್ತದೆ. 12 ಸಿಬ್ಬಂದಿ ಸೇರಿದಂತೆ 241 ಜನ ದುರ್ಘಟನೆಯಲ್ಲಿ ಸಾವಿಗೀಡಾದರು.

ವಿಮಾನ ಪತನಗೊಂಡ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಅದರಲ್ಲೂ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿ ವಿಡಿಯೋವೊಂದು ಎಲ್ಲರ ಗಮನ ಸೆಳೆಯಿತು. ಆ ವಿಡಿಯೋ ಮಾಡಿದ್ದು ಆರ್ಯನ್ ಎಂಬ ಹುಡುಗ. ಈ ವಿಡಿಯೋ ವೈರಲ್ ಆದ ನಂತರ ಆರ್ಯನ್​ ತೊಂದರೆಯಲ್ಲಿ ಸಿಲುಕಿರುವಂತೆ ಕಾಣುತ್ತಿದೆ.

ಏರ್’ಇಂಡಿಯಾ ವಿಮಾನವು ಆಕಾಶದಲ್ಲಿ ತುಂಬಾ ಕೆಳಮಟ್ಟದಲ್ಲಿ ಹಾರುತ್ತಿದ್ದರಿಂದ ನಾನು ವಿಡಿಯೋ ಮಾಡಿದೆ. ಇದೆ ವೇಳೆ ವಿಮಾನ ಪತನಗೊಂಡಾಗ ತುಂಬಾ ಭಯಪಟ್ಟೆ ಎಂದು ಆರ್ಯನ್​ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾನೆ. ಆರ್ಯನ್ ತನ್ನ ಜೀವನದಲ್ಲಿ ಒಮ್ಮೆಯೂ ವಿಮಾನ ಏರದಿರಲು ನಿಶ್ಚಯಿಸಿದ್ದಾನಂತೆ. ಸದ್ಯ ವಿಮಾನವೆಂದರೆ ಹೆದರುತ್ತಿದ್ದಾನೆ ಎಂದು ಆತನ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಹೇಳುತ್ತಿದ್ದಾರೆ.

ಆರ್ಯನ್ ತೆಗೆದ ವಿಡಿಯೋದಲ್ಲಿ, ಏರ್’ಇಂಡಿಯಾ ವಿಮಾನವು ನೆಲದಿಂದ ತುಂಬಾ ಕೆಳಮಟ್ಟದಲ್ಲಿ ಹಾರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದಲ್ಲದೆ ವಿಮಾನದ ರೆಕ್ಕೆಗಳು ಸಹ ಭಿನ್ನವಾಗಿವೆ. ವಿಮಾನ ಪತನ ಆಗುತ್ತಿರುವುದನ್ನು ತನ್ನ ಸ್ನೇಹಿತರಿಗೆ ತೋರಿಸಲು ತನ್ನ ಫೋನ್‌ನಲ್ಲಿ ವಿಮಾನದ ದೃಶ್ಯಗಳನ್ನು ರೆಕಾರ್ಡ್ ಮಾಡಿದ್ದಾಗಿ ಆರ್ಯನ್ ಹೇಳುತ್ತಾನೆ.

ಆರ್ಯನ್ ಕುಟುಂಬವು ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಲಕ್ಷ್ಮಿ ನಗರದಲ್ಲಿ ವಾಸಿಸುತ್ತಿದೆ. ತನ್ನ ಮನೆಯ ಮೇಲಿದ್ದಾಗ ತುಂಬಾ ಕೆಳ ಮಟ್ಟದಲ್ಲಿ ಹಾರಿ ಹೋದ ಏರ್ ಇಂಡಿಯಾ ಡ್ರೀಮ್‌ಲೈನರ್ 787-8 ನೆಲಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಳ್ಳುವುದನ್ನು ಆರ್ಯನ್​ ರೆಕಾರ್ಡ್ ಮಾಡಿದ್ದಾನೆ. ಅಪಘಾತದ ತನಿಖೆಯಲ್ಲಿ ಈ ವಿಡಿಯೋ ಈಗ ಪ್ರಮುಖ ಸಾಕ್ಷಿಯಾಗಿದೆ.

ವಿಮಾನಗಳು ಇಷ್ಟು ಕಡಿಮೆ ಎತ್ತರದಲ್ಲಿ ಹಾರುವುದು ಮತ್ತು ಅಷ್ಟು ದೊಡ್ಡ ಶಬ್ದ ಮಾಡುವುದು ನಾನು ಎಂದಿಗೂ ಕೇಳಿಲ್ಲ. ಅದನ್ನು ನನ್ನ ಸ್ನೇಹಿತರಿಗೆ ತೋರಿಸಲು ನಾನು ವಿಡಿಯೋ ಮಾಡಿದೆ. ಆದರೆ ಅದು ಪತನದ ದೃಶ್ಯವಾಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ವಿಮಾನವು ಗಾಳಿಯಲ್ಲಿ ತೂಗಾಡುತ್ತಿರುವುದನ್ನು ಮತ್ತು ನಂತರ ದೊಡ್ಡ ಶಬ್ದದೊಂದಿಗೆ ಬೆಂಕಿ ಹೊತ್ತಿಕೊಳ್ಳುವುದನ್ನು ನೋಡಿದಾಗ ನನಗೆ ತುಂಬಾ ಭಯವಾಯಿತು ಎಂದು ಆರ್ಯನ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಇನ್ನು ಈ ಘಟನೆಯ ನಂತರ ಆರ್ಯನ್ ಸರಿಯಾಗಿ ನಿದ್ದೆ ಮಾಡುತ್ತಿಲ್ಲ ಎಂದು ಆತನ ಕುಟುಂಬದ ಸದಸ್ಯರು ಹೇಳಿದ್ದಾರೆ. ವಿವಿಧ ಮಾಧ್ಯಮಗಳಿಂದ ಪದೆಪದೆ ಬರುವ ಫೋನ್ ಕರೆಗಳು ತೊಂದರೆ ನೀಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಅಪಘಾತದ ನಂತರ ಆರ್ಯನ್ ಮಾತ್ರವಲ್ಲದೆ ಲಕ್ಷ್ಮಿ ನಗರದ ಜನರು ಭಯಭೀತರಾಗಿದ್ದಾರೆ ಎಂದು ಆರ್ಯನ್​ ಕುಟುಂಬಸ್ಥರು ಹೇಳಿದರು.

ಭಾರತದ ಇತಿಹಾಸದಲ್ಲಿ ಕಂಡು ಕೇಳರಿಯದ ಮಹಾ ದುರಂತ
ಭಾರತದ ಇತಿಹಾಸದಲ್ಲಿ ಅತಿದೊಡ್ಡ ವಿಮಾನ ದುರಂತ ಗುಜರಾತ್​ನ ಅಹಮದಾಬಾದ್​ನಲ್ಲಿ ಸಂಭವಿಸಿದೆ. ಗುರುವಾರ (ಜೂನ್​ 12) ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್​ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಗರು ಸೇರಿದಂತೆ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾಗಿದ್ದಾರೆ. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಬೇಕಿದೆ. ಈ ಹಿಂದೆ ಭಾರತದಲ್ಲಿ ಹಲವು ನಾಗರಿಕ ವಿಮಾನ ಪತನ ದುರಂತ ನಡೆದಿದ್ದವಾದರೂ ಈ ಪ್ರಮಾಣದ ಭೀಕರ ಅಪಘಾತ ಇದೆ ಮೊದಲು. (ಏಜೆನ್ಸೀಸ್​)

Leave a Reply

Your email address will not be published. Required fields are marked *