ಕಾಖಂಡಕಿ: 27 ರಂದು ಮಲ್ಲಾರಾಧ್ಯರ ಕೋರಿಸಿದ್ಧೇಶ್ವರರ ಜಾತ್ರೋತ್ಸವ

ಜಿಲ್ಲೆ

ಚಿತ್ತಾಪುರ: ಯಡ್ರಾಮಿ ತಾಲೂಕಿನ ಶ್ರೀಕ್ಷೇತ್ರ ಕಾಖಂಡಕಿ ಗ್ರಾಮದಲ್ಲಿ ಮೇ.27 ಮತ್ತು 28 ರಂದು ಅತ್ಯಂತ ವಿಜೃಂಭಣೆಯಿಂದ ಸದ್ಗುರು ಮಲ್ಲಾರಾಧ್ಯರ ಹಾಗೂ ಸದ್ಗುರು ಕೋರಿಸಿದ್ದೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ.

ನಾಲವಾರ ಹಾಗೂ ಕಾಖಂಡಕಿ ಶ್ರೀಮಠಗಳ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗುವ ಜಾತ್ರಾ ಮಹೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಮೇ.27ರ ಬಾದಾಮಿ ಅಮಾವಾಸ್ಯೆಯ ದಿನದಂದು ಸಂಜೆ ನಾಡಿನ ಅನೇಕ ಪೂಜ್ಯ ಮಠಾಧೀಶರ ಸಮ್ಮುಖದಲ್ಲಿ ಶಿವಾನುಭವ ಸಾಂಸ್ಕೃತಿಕ ಸಂಭ್ರಮ ಹಾಗೂ ಪೂಜ್ಯರ ತುಲಾಭಾರ ಕಾರ್ಯಕ್ರಮ ನಡೆಯಲಿದೆ.
ಮಧ್ಯರಾತ್ರಿ ಭಕ್ತರ ಹರಕೆಯ ತನಾರತಿ ಉತ್ಸವ ಕಾರ್ಯಕ್ರಮ ನಡೆಯಲಿದೆ.

ಮರುದಿನ 28 ರಂದು ನಾಡಿನ-ಪರನಾಡಿನ ಸಹಸ್ರಾರು ಸದ್ಭಕ್ತರ ಮಧ್ಯೆ ಸದ್ಗುರು ಮಲ್ಲಾರಾಧ್ಯರ ಹಾಗೂ ಕೋರಿಸಿದ್ಧೇಶ್ವರ ಶಿವಯೋಗಿಗಳ ಭವ್ಯ ರಥೋತ್ಸವ ಅದ್ಧೂರಿಯಾಗಿ ನಡೆಯಲಿದೆ.

ರಥೋತ್ಸವದ ಸಂದರ್ಭದಲ್ಲಿ ವಿಶೇಷ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ ಹಾಗೂ ವಿವಿಧ ಜಾನಪದ ಕಲಾತಂಡಗಳ ಕಲಾಪ್ರದರ್ಶನ ರಥೋತ್ಸವದ ಮೆರುಗು ಹೆಚ್ಚಿಸಲಿವೆ.

ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ಹಾಗೂ ಸದ್ಭಕ್ತರಿಗೆ ಗುರುರಕ್ಷಾ ಪ್ರದಾನ ಸಮಾರಂಭ ರಾತ್ರಿ ಜರುಗುವದು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇವರ್ಗಿ ಶಾಸಕ ಮತ್ತು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ವಹಿಸುವರು, ಮುಖ್ಯ ಅತಿಥಿಗಳಾಗಿ ಕಲಬುರಗಿ ಶಾಸಕ ಅಲ್ಲಂಪ್ರಭು ಪಾಟೀಲ, ಸಿಂದಗಿಯ ಶಾಸಕ ಅಶೋಕ ಮನಗೂಳಿ. ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ್, ಮಾಜಿ ಶಾಸಕರಾದ ದೊಡ್ಡಪ ಗೌಡ ನರಿಬೋಳ, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ್ ಪಾಟೀಲ ತೇಲ್ಕೂರ್, ಮುಖಂಡರಾದ ಅಶೋಕ್ ಸಾಹು ಗೋಗಿ, ಶಿವರಾಜ್ ಪಾಟೀಲ ರೆದ್ದೆವಡಗ, ರಾಜಶೇಖರ್ ಸೀರಿ ಜೇವರ್ಗಿ ಸೇರಿದಂತೆ ಅನೇಕರು ಭಾಗವಹಿಸುವರು.

ಆಗಮಿಸುವ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಇರುವುದು, ಜಾತ್ರೋತ್ಸವದ ಪ್ರಯುಕ್ತ ಈಗಾಗಲೇ ಶ್ರೀಮಠದಲ್ಲಿ ಮಡಿವಾಳಯ್ಯ ಶಾಸ್ತ್ರಿ ಜೇರಟಗಿ ಅವರಿಂದ ಶ್ರೀಕ್ಷೇತ್ರ ನಾಲವಾರದ ಪವಾಡ ಪುರುಷ ಸಿದ್ದ ಶಿವಯೋಗಿ ಕೂರಿಸಿದ್ದೇಶ್ವರರ ಪುರಾಣ ಪ್ರವಚನ, ಸಿದ್ದಯ್ಯ ಸ್ವಾಮಿ ಪಡದಳ್ಳಿ ಹಾಗೂ ರಾಜಶೇಖರ ಗೆಜ್ಜಿ ಅವರಿಂದ ಸಂಗೀತ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕ್ರಿಯೆಗಳು ಕಳೆದ ವಾರದಿಂದ ನಿರಂತರವಾಗಿ ನಡೆಯುತ್ತಿವೆ.

ಜಾತ್ರಾಮಹೋತ್ಸವದಲ್ಲಿ ನಾಡಿನ ಹರಗುರುಚರಮೂರ್ತಿಗಳು, ಸಚಿವರು, ಶಾಸಕರು, ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯ ಸಾಧಕರು ಭಾಗವಹಿಸಲಿದ್ದಾರೆ.

ಜಾತ್ರಾ ಮಹೋತ್ಸವಕ್ಕಾಗಿ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಸದ್ಭಕ್ತರು ಪಾದಯಾತ್ರೆ ಮೂಲಕ ಆಗಮಿಸುವುದು ವಿಶೇಷವಾಗಿದೆ.

Leave a Reply

Your email address will not be published. Required fields are marked *