ಕಲಬುರಗಿ: ನಗುವದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಘಾತವಾಗುವ ಸಂಭವನೀಯತೆ ಕಡಿಮೆಯಾಗುತ್ತದೆ. ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಮಾನಸಿಕವಾಗಿ ನೆಮ್ಮದಿ, ವ್ಯಕ್ತಿಯ ಆಯಸ್ಸು ಹೆಚ್ಚಾಗುತ್ತದೆ ಎಂದು ಖ್ಯಾತ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹೇಳಿದರು.
ಅಫಜಲಪುರ ತಾಲೂಕಿನ ನೀಲೂರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗ ಮತ್ತು ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಇವುಗಳ ವತಿಯಿಂದ ಜರುಗಿದ ‘ವಿಶ್ವ ನಗುವಿನ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬವಿದ್ದ ಕಾರಣ ಮನೆಯಲ್ಲಿರುವ ಹಿರಿಯರಾದ ಅಜ್ಜ-ಅಜ್ಜಿ, ಮಕ್ಕಳು, ಮೊಮ್ಮಕ್ಕಳಿಗೆ ಬಾಲ್ಯದಿಂದಲೆ ಅನೇಕ ಹಾಸ್ಯ ನೀತಿ ಕಥೆಗಳನ್ನು ಹೇಳುವದರಿಂದ ಆರಂಭದಿಂದಲೆ ಹಾಸ್ಯ ಪ್ರವೃತ್ತಿ ಬೆಳೆಯುತ್ತಿತ್ತು. ಆದರೆ ಈಗ ಇದೆಲ್ಲವೂ ಮಾಯವಾಗಿದೆಯೆಂದು ಕಳವಳ ವ್ಯಕ್ತಪಡಿಸಿದರು.
ಚಿಂತಕ ಎಚ್.ಬಿ ಪಾಟೀಲ ಮಾತನಾಡಿ, ಇಂದಿನ ಆಧುನಿಕ ಒತ್ತಡದ ಕಾಲದಲ್ಲಿ ಬದುಕುತ್ತಿರುವ ಸಂದರ್ಭದಲ್ಲಿ ನಮ್ಮಲ್ಲಿರುವ ನಗು ಮಾಯವಾಗಿ, ಅಶಾಂತಿ ಎದುರಿಸುತ್ತಿದ್ದೆವೆ. ಜೀವನದಲ್ಲಿ ಬರುವ ಸುಖ-ದುಖಃಗಳನ್ನು ಸಮಾನವಾಗಿ ಸ್ವೀಕರಿಸಬೇಕು. ‘ಹಸನ್ಮುಖಿ ಸದಾಸುಖಿ’ ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ, ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ, ಪ್ರಮುಖರಾದ ಶಿವಯೋಗೆಪ್ಪಾ ಎಸ್. ಬಿರಾದಾರ, ಅಸ್ಲಾಂ ಶೇಖ್, ಸುಮಿತ್ರಾಬಾಯಿ ಗಾಯಕವಾಡ, ದತ್ರಾತ್ರೇಯ, ಸುಜಯ್ ಎಸ್.ವಂಟಿ ಸೇರಿದಂತೆ ಗ್ರಾಮಸ್ಥರು, ಮತ್ತಿತರರು ಉಪಸ್ಥಿತರಿದ್ದರು.