ATM ಕ್ಯಾಷ್ ವಿತ್​​ಡ್ರಾ ಶುಲ್ಕ ಹೆಚ್ಚಳ, SB ಅಕೌಂಟ್​​ನಲ್ಲಿ ಹೆಚ್ಚು ಹಣಕ್ಕೆ ಹೆಚ್ಚು ಬಡ್ಡಿ: ಏಪ್ರಿಲ್ 1 ರಿಂದ ಬದಲಾವಣೆ

ನವದೆಹಲಿ

ನವದೆಹಲಿ: ಏಪ್ರಿಲ್ 1 ರಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ತರ ಬದಲಾವಣೆ ತಂದಿದ್ದು, ATM ಕ್ಯಾಷ್ ವಿತ್​ಡ್ರಾ ಶುಲ್ಕ ಹೆಚ್ಚಳ, SB ಖಾತೆ ಹೆಚ್ಚು ಹಣಕ್ಕೆ ಹೆಚ್ಚು ಬಡ್ಡಿ ಸೇರಿದಂತೆ ಹಲವು ನಿಯಮಗಳಲ್ಲಿ ಪರಿಷ್ಕರಣೆ ತಂದಿದೆ.

1 ಏಪ್ರಿಲ್ 2025 ರಿಂದ ಹೊಸ ಬ್ಯಾಂಕಿಂಗ್ ನಿಯಮಗಳು ಜಾರಿಗೆ ಬರುತ್ತಿದ್ದು, ATM ಹಣ ಹಿಂಪಡೆಯುವಿಕೆ, ಉಳಿತಾಯ ಖಾತೆಗೆ ಸಂಬಂಧಿಸಿದ ನಿಯಮಗಳಲ್ಲಿ RBI ಸಾಕಷ್ಟು ಬದಲಾವಣೆ ಮಾಡಿದೆ. ATM ಹಣ ವಿತ್ ಡ್ರಾಗೆ ಸಂಬಂಧಿಸಿದಂತೆ ವಿಧಿಸುತ್ತಿದ್ದ ಶುಲ್ಕ ಹೆಚ್ಚಳ ಸೇರಿದಂತೆ ಕೆಲ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ನಿಯಮ ಬದಲಾವಣೆಗಳಾಗುತ್ತಿವೆ.

ರಾಷ್ಟ್ರೀಯ ಪಾವತಿ ನಿಗಮ (NPCI) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್, ಮೇ 1, 2025 ರಿಂದ ಜಾರಿಗೆ ಬರುವಂತೆ ನಗದು ಹಿಂಪಡೆಯುವಿಕೆಗಾಗಿ ATM ಇಂಟರ್‌ಚೇಂಜ್ ಅನ್ನು 17 ರೂ.ಗಳಿಂದ 19 ರೂ.ಗಳಿಗೆ ಹೆಚ್ಚಿಸಲು ಅನುಮೋದನೆ ನೀಡಿವೆ.

ದೇಶೀಯ ಹಣಕಾಸು ಮತ್ತು ಹಣಕಾಸುಯೇತರ ವಹಿವಾಟುಗಳಿಗೆ ಇಂಟರ್‌ಚೇಂಜ್ ಅನ್ನು ಪರಿಷ್ಕರಿಸಲಾಗಿದೆ. ಮಾರ್ಚ್ 13 ರ NPCI ಸುತ್ತೋಲೆಯ ಪ್ರಕಾರ, ಹಣಕಾಸುಯೇತರ ವಹಿವಾಟುಗಳು 7 ರೂ.ಗಳ ಇಂಟರ್‌ಚೇಂಜ್‌ಗೆ ಒಳಪಟ್ಟಿರುತ್ತವೆ. ಬ್ಯುಸಿನೆಸ್ ಸ್ಟ್ಯಾಂಡರ್ಡ್, ರಾಷ್ಟ್ರೀಯ ಹಣಕಾಸು ಸ್ವಿಚ್ (NFS) ATM ನೆಟ್‌ವರ್ಕ್‌ನ ಸದಸ್ಯರಿಗೆ ಕಳುಹಿಸಲಾದ ಪತ್ರವನ್ನು ಪರಿಶೀಲಿಸಿದೆ. ಇಂಟರ್‌ಚೇಂಜ್ ದರದ ಮೇಲೆ ಪ್ರತ್ಯೇಕ GST ವಿಧಿಸಲಾಗುತ್ತದೆ.

ATM ಕ್ಯಾಷ್ ವಿತ್​​ಡ್ರಾ ಶುಲ್ಕ
ಬಹುತೇಕ ಎಲ್ಲಾ ಬ್ಯಾಂಕುಗಳು ಇಂಟರ್​​ಚೇಂಜ್ ಶುಲ್ಕ ಹೆಚ್ಚಿಸಿವೆ. ATM ಅನುಮತಿಸಿದ ಮಿತಿಗಿಂತ ಹೆಚ್ಚು ಬಾರಿ ಹಣ ವಿತ್​​ಡ್ರಾ ಮಾಡಿದರೆ ಶುಲ್ಕ ಕಟ್ಟಬೇಕಾಗುತ್ತದೆ. ಈ ಶುಲ್ಕದ ದರವನ್ನು ಇದೀಗ ಹೆಚ್ಚಿಸಲಾಗಿದೆ. ಮೇ 1 ರಿಂದ ಈ ನಿಯಮ ಜಾರಿಗೆ ಬರಲಿದೆ. ನಿಗದಿತ ಮಿತಿ ಮೀರಿ ಹೆಚ್ಚು ಬಾರಿ ವಿತ್ ಡ್ರಾ ಮಾಡಿದರೆ ಆಗ ಪ್ರತಿ ಹೆಚ್ಚುವರಿ ಟ್ರಾನ್ಸಾಕ್ಷನ್​ಗೂ ನಿರ್ದಿಷ್ಟ ಶುಲ್ಕ ಇರುತ್ತದೆ. ಮೇ 1ರಿಂದ ಈ ಶುಲ್ಕದಲ್ಲಿ 1-2 ರೂ ಹೆಚ್ಚಳ ಮಾಡಲಾಗುತ್ತಿದೆ. ಕ್ಯಾಷ್ ವಿತ್​ಡ್ರಾ ಮಾಡಿದರೆ ವಿಧಿಸುವ ಶುಲ್ಕ 17 ರೂ.ಯಿಂದ 19 ರೂಗೆ ಹೆಚ್ಚಿಸಲಾಗುತ್ತಿದೆ. ಅಕೌಂಟ್ ಬ್ಯಾಲನ್ಸ್ ಪರಿಶೀಲನೆ ಸೇರಿದಂತೆ ನಾನ್-ಟ್ರಾನ್ಸಾಕ್ಷನ್ ಶುಲ್ಕ 6 ರೂ ಇದ್ದದ್ದು 7 ರೂ ಆಗುತ್ತದೆ ಎಂದು ಹೇಳಲಾಗಿದೆ.

ಮಿನಿಮಮ್ ಬ್ಯಾಲನ್ಸ್ ಶುಲ್ಕ
ದೇಶದ ಅತಿ ದೊಡ್ಡ ಬ್ಯಾಂಕಿಂಗ್ ಸಂಸ್ಥೆ SBI, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಮೊದಲಾದ ಪ್ರಮುಖ ಬ್ಯಾಂಕುಗಳು ತಮ್ಮ ಮಿನಿಮಮ್ ಬ್ಯಾಲನ್ಸ್ ನಿಯಮ ಪರಿಷ್ಕರಿಸುತ್ತಿವೆ. ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೇರೆ ಬೇರೆ ಮಿನಿಮಮ್ ಬ್ಯಾಲನ್ಸ್ ನಿಯಮಗಳನ್ನು ಅಳವಡಿಸಲಾಗುತ್ತಿದೆ.

ಸೇವಿಂಗ್ಸ್ ಅಕೌಂಟ್​ ಹೆಚ್ಚು ಹಣಕ್ಕೆ ಹೆಚ್ಚು ಬಡ್ಡಿ
ಸೇವಿಂಗ್ಸ್ ಬ್ಯಾಂಕ್ ಅಕೌಂಟ್​ಗಳಲ್ಲಿ ನೀವೆಷ್ಟು ಹಣ ಬ್ಯಾಲನ್ಸ್ ಇಟ್ಟಿದ್ದರೂ ಬಡ್ಡಿದರ ಫ್ಲ್ಯಾಟ್ ಇರುತ್ತಿತ್ತು. 1,000 ರೂ ಇದ್ದವರಿಗೂ ಶೇ. 4, ಒಂದು ಲಕ್ಷ ಹಣ ಇಟ್ಟವರಿಗೂ ಶೇ. 4 ಬಡ್ಡಿ ಮಾತ್ರ ಸಿಗುತ್ತದೆ. ಆದರೆ ಈಗ ಬ್ಯಾಂಕುಗಳು ಈ ನಿಯಮ ಬದಲಾವಣೆ ಮಾಡುತ್ತಿವೆ. ಅಕೌಂಟ್​ಗಳಲ್ಲಿ ಹೆಚ್ಚು ಹಣ ಇದ್ದರೆ ಹೆಚ್ಚು ಬಡ್ಡಿದರ, ಕಡಿಮೆ ಹಣ ಇದ್ದರೆ ಕಡಿಮೆ ಬಡ್ಡಿದರ ನಿಗದಿ ಮಾಡಲಾಗುತ್ತಿದೆ.

ಕ್ರೆಡಿಟ್ ಕಾರ್ಡ್ ಲಾಭಗಳು
ಎಸ್​​ಬಿಐ, ಐಡಿಎಫ್​​ಸಿ ಫಸ್ಟ್ ಬ್ಯಾಂಕ್ ಇತ್ಯಾದಿ ಪ್ರಮುಖ ಬ್ಯಾಂಕುಗಳು ತಮ್ಮ ವಿಸ್ತಾರ ಕ್ರೆಡಿಟ್ ಕಾರ್ಡ್​​ಗಳ ನಿಯಮದಲ್ಲಿ ಬದಲಾವಣೆ ಮಾಡುತ್ತಿವೆ. ಟಿಕೆಟ್ ವೋಚರ್, ರಿನಿವಲ್ ಲಾಭ, ಮೈಲ್​​ಸ್ಟೋನ್ ರಿವಾರ್ಡ್ ಇತ್ಯಾದಿ ಉತ್ತೇಜಕ ಪ್ಲಾನ್​​ಗಳನ್ನು ಕೈಬಿಡಲಾಗುತ್ತಿದೆ.

Leave a Reply

Your email address will not be published. Required fields are marked *