ದಾವಣಗೆರೆ: ಜಾತ್ರಾ ಮಹೋತ್ಸವಕ್ಕೆ ಒಂದು ದಿನ ಇರುವಾಗಲೇ ಕಳ್ಳರು ಹುಂಡಿ ಕಳವು ಮಾಡಿದ ಘಟನೆ ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಹೊರವಲಯದಲ್ಲಿರುವ ಮಾದಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.
ದೇವಸ್ಥಾನದಲ್ಲಿ ಸುಮಾರು 1 ಲಕ್ಷ ರೂ.ಗೂ ಹೆಚ್ಚು ನಗದು ಕಳವು ಮಾಡಲಾಗಿದೆ. ಪ್ರತಿ ವರ್ಷ ಜಾತ್ರೆಗೂ ಮುನ್ನ ಫೆಬ್ರುವರಿ ತಿಂಗಳಿನಲ್ಲಿ ಹುಂಡಿ ತೆರೆದು ಹಣ ಎಣಿಕೆ ಮಾಡಲಾಗುತ್ತಿತ್ತು. ಅದೆ ರೀತಿ ಈ ವರ್ಷವು ಹುಂಡಿ ತೆರೆದು ಹಣ ಎಣಿಸಲು ತೀರ್ಮಾನಿಸಲಾಗಿತ್ತು. ಆದರೆ ರವಿವಾರ ರಾತ್ರಿ ಕಳ್ಳರು ದೇವಸ್ಥಾನದ ಮುಂಭಾಗದಲ್ಲಿದ್ದ ಹುಂಡಿ ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ.
ಈ ದೇವಸ್ಥಾನದಲ್ಲಿ ಇದು ಮೂರನೇ ಬಾರಿ ಹುಂಡಿ ಕಳವು ಮಾಡಲಾಗಿದೆ. ಆದರೂ ದೇವಸ್ಥಾನದ ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸದಿರುವುದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದೊಂದು ತಿಂಗಳಿನಲ್ಲಿ ತಾಲೂಕಿನ ಸಿದ್ದಮ್ಮನಹಳ್ಳಿ, ಅಣಬೂರು ಗೊಲ್ಲರಹಟ್ಟಿ ಗ್ರಾಮದಲ್ಲಿನ ದೇವಸ್ಥಾನಗಳಲ್ಲಿಯೂ ಹುಂಡಿ ಕಳ್ಳತನ ನಡೆದಿತ್ತು.
ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ದೇಗುಲದ ಕಳ್ಳತನಕ್ಕೆ ಬ್ರೇಕ್ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.