ಜೀತ ಪದ್ದತಿ ಅಮಾನವಿಯ ಮತ್ತು ಶಿಕ್ಷಾರ್ಹ ಅಪರಾಧ

ಜಿಲ್ಲೆ

ಕಲಬುರಗಿ: ಬಡವರನ್ನು ಶೋಷಣೆ ಮಾಡುವ ಜೀತ ಪದ್ದತಿ ಅಮಾನವೀಯ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಅದರ ಸಂಪೂರ್ಣ ನಿರ್ಮೂಲನಗೆ ಎಲ್ಲರ ಸಹಕಾರ ಅಗತ್ಯ ಎಂದು ಸಾಮಾಜಿಕ ಕಾರ್ಯಕರ್ತ ಶಿವಕುಮಾರ ಬಿರಾದಾರ ಹೇಳಿದರು.

ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ಸ್ವಾತಿ ಮತ್ತು ಶಿವಾ ಪ್ರೌಢಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ಜೀತ ಪದ್ದತಿಯ ನಿರ್ಮೂಲನೆ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬ್ರಿಟಿಷರ ಆಡಳಿತ, ಬಡತನ, ನಿರುದ್ಯೋಗ, ಅನಕ್ಷರತೆಯಂತಹ ಕಾರಣಗಳಿಂದ ದಾರಿದ್ರ್ಯಉಂಟಾಗುವ ಮೂಲಕ ತುಂಬಾ ಕಷ್ಟ ಎದುರಿಸುವ ಸಂದರ್ಭ ಉಂಟಾಗಿ ಜೀತದಾಳಾಗಿ ದುಡಿಯುವದು ಆರಂಭವಾಯಿತು ಎಂದರು.

ಅರ್ಥಶಾಸ್ತ್ರ ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ ಪಾಟೀಲ ಮಾತನಾಡಿ, ಜೀತ ಪದ್ದತಿಯ ನಿರ್ಮೂಲನೆಗಾಗಿ 1976ರಲ್ಲಿ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಿದೆ. ಜೀತ ಪದ್ಧತಿಯು ವ್ಯಕ್ತಿಯನ್ನು ಹಿಂಸಿಸುವ ಕೆಟ್ಟ ಪದ್ಧತಿಯಾಗಿದೆ. ಬಡವರು, ಅಸಹಾಯಕರು ಶ್ರೀಮಂತರ ತುತ್ತಾಗುತ್ತಿರುವದು ನೋವಿನ ಸಂಗತಿ. ಜೀತದಾಳುಗಳಿಗೆ ಸಾಲಮುಕ್ತ ಮಾಡಿ, ಅವರಿಗೆ ಸೌಲಭ್ಯಗಳನ್ನು ನೀಡಲು ಕಾಯ್ದೆ-ಕಾನೂನುಗಳಲ್ಲಿ ಅವಕಾಶವಿದೆ. ಜೀತ ವಿಮುಕ್ತಿ ಹೊಂದಿದವರಿಗೆ ದೊರೆಯುವ ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಅಗತ್ಯ. ಶ್ರಮಿಕ ವರ್ಗದ ಬಗ್ಗೆ ಕೀಳರಿಮೆ ಬೇಡ. ದುಡಿಯುವ ವರ್ಗ ಕನಿಷ್ಟ ಮತ್ತು ದುಡಿಸಿಕೊಳ್ಳುವ ವರ್ಗ ಶ್ರೇಷ್ಟವೆಂಬ ಮನೋಭಾವನೆ ಬೇಡ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಮಹಾದೇವ ಸಿ ಗಾರಂಪಳ್ಳಿ, ಶುಭಂ, ಸಮರ್ಥ ಸೇರಿದಂತೆ‌ ಅನೇಕರು ಇದ್ದರು.‌

Leave a Reply

Your email address will not be published. Required fields are marked *