ನಿಮಗೆ ಸಲಾಂ ಹೊಡಿಬೇಕಾ ?: ತಹಸೀಲ್ದಾರ್‌ಗೆ ಕಂದಾಯ ಸಚಿವ ತರಾಟೆ

ರಾಜ್ಯ

ಬೆಂಗಳೂರು: ಪೋಡಿ ದುರಸ್ತಿ ಮುಗಿದಿದ್ದರು ಎಡಿಎಲ್‌ಆರ್‌ಗಳಿಗೆ ಕಡತಗಳನ್ನು ಕಳುಹಿಸದಿರುವ ತಹಸೀಲ್ದಾರರನ್ನು ತರಾಟೆಗೆ ತೆಗೆದುಕೊಂಡ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜನ ನಿಮ್ಮ ಬಳಿ ಬಂದು ಸಲಾಂ ಹೊಡೀಬೇಕಾ ? ಅಲ್ಲಿ ರೈತರು ತ್ರಿಶಂಕು ಸ್ಥಿತಿಯಲ್ಲಿದ್ದು, ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ನಿಮ್ಮಂತಹವರು ಮಾಡುತ್ತಿರುವ ಕೆಲಸದಿಂದ ಇಡಿ ಇಲಾಖೆಗೆ ಕೆಟ್ಟ ಹೆಸರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಕಾಸಸೌಧದಿಂದ ರಾಜ್ಯದ ಎಲ್ಲಾ ತಹಸೀಲ್ದಾರ್‌ ಹಾಗೂ ಎಡಿಎಲ್‌ಆ‌ರ್‌ (ಭೂ ದಾಖಲೆಯ ಸಹಾಯ ನಿರ್ದೇಶಕರು) ಅಧಿಕಾರಿಗಳ ಜತೆ ಶುಕ್ರವಾರ ವೀಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳ್ಳಾರಿ ತಾಲೂಕಿನಲ್ಲಿ ಈವರೆಗೆ 397 ಹಾಗೂ ಬೆಳಗಾವಿಯಲ್ಲಿ 147 ಪ್ರಕರಣಗಳಲ್ಲಿ 1 ರಿಂದ 5 ನಮೂನೆ ಪೋಡಿ ದುರಸ್ತಿ ಕೆಲಸ ಮುಗಿದಿದೆ. ಆದರೆ ಯಾವ ಪ್ರಕರಣವನ್ನು ತಹಸೀಲ್ದಾರರು ಮುಂದಿನ ಹಂತದ ಕೆಲಸಕ್ಕಾಗಿ ಎಡಿಎಲ್‌ಆರ್‌ಗಳಿಗೆ ಕಳುಹಿಸಿಲ್ಲ.

ಇದೆ ರೀತಿ ಚಿಕ್ಕೋಡಿ, ಅಥಣಿ, ಔರಾದ್‌, ಬೀದರ್‌ ಚಿತ್ರದುರ್ಗ, ಚಾಮರಾಜನಗರ, ಗುಂಡ್ಲುಪೇಟೆ, ಹುಮನಾಬಾದ, ಚಳ್ಳಕೆರೆ, ಹೊಳಲ್ಕೆರೆ ಸೇರಿದಂತೆ ಹಲವಾರು ತಾಲೂಕುಗಳಲ್ಲಿ ದುರಸ್ತಿ ಕೆಲಸ ಮುಗಿದಿದ್ದರು ಎಡಿಎಲ್‌ಆರ್‌ಗಳಿಗೆ ಕಳುಹಿಸಿರುವ ಕಡತಗಳ ಸಂಖ್ಯೆ ಶೂನ್ಯ. ಜನರೇನು ನಿಮ್ಮ ಬಳಿ ಬಂದು ಸಲಾಂ ಹೊಡೆಯಬೇಕು ಅಂತ ನೀವು ಕಾಯುತ್ತಿದ್ದಿರಾ ಎಂದು ತಹಸೀಲ್ದಾರರ ವಿರುದ್ಧ ಸಚಿವರು ಆಕ್ರೋಶ ಹೊರಹಾಕಿದರು.

ರಾಯಭಾಗ 9, ಹುಕ್ಕೇರಿ 20, ರಾಮದುರ್ಗ 6, ಬೀದರ 6, ಬಳ್ಳಾರಿ 4, ಸವದತ್ತಿ 4 ಹೊಳಲ್ಕೆರೆ 9, ಕಾಗವಾಡ 5, ಚನ್ನಗಿರಿ 5, ಕಡೂರು 8, ಹೊಸಕೋಟೆ 12, ಮಂಡ್ಯ 11, ಮಾಗಡಿ 18, ಕನಕಪುರ 14, ಹಾರೋಹಳ್ಳಿ 20, ರಾಮದುರ್ಗ 10, ಬೆಂಗಳೂರು ಪಶ್ಚಿಮ 10, ನೆಲಮಂಗಲ 8 ಸೇರಿದಂತೆ 20 ತಾಲೂಕುಗಳಲ್ಲಿ ವರ್ಷಕ್ಕಿಂತ ಅಧಿಕ ಸಮಯದ ಅಲ್ಪ ಪ್ರಮಾಣದ ಪ್ರಕರಣಗಳು ಬಾಕಿ ಉಳಿದಿವೆ. ಅಧಿಕಾರಿಗಳು ಶೀಘ್ರ ಈ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಜನರಿಗೆ ನ್ಯಾಯ ಕಲ್ಪಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ಬಗರ್‌ಹುಕುಂ ಅರ್ಜಿ ಸಲ್ಲಿಸಿದವರು ಮೃತಪಟ್ಟರೆ ಕುಟುಂಬಸ್ಥರಿಗೆ ಜಮೀನು ಬಗರ್‌ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫ‌ಲಾನುಭವಿಗಳು ದುರಾದೃಷ್ಟವಶಾತ್‌ ಮೃತಪಟ್ಟರೆ, ಅವರ ಕುಟುಂಬಸ್ಥರಿಗೆ ಕಾನೂನು ಪ್ರಕಾರ ಜಮೀನು ಮಂಜೂರು ಮಾಡಿ ಡಿಜಿಟಲ್‌ ಸಾಗುವಳಿ ಚೀಟಿ ನೀಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ, ರಾಜ್ಯದ ಎಲ್ಲಾ ತಹಸೀಲ್ದಾರ್‌ ಹಾಗೂ ಎಡಿಎಲ್‌ ಆರ್‌ಗಳಿಗೆ ಸಭೆಯಲ್ಲಿ ಸೂಚಿಸಿದರು.

ಅಕ್ರಮ-ಸಕ್ರಮ ಬಗರ್‌ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದ ಫ‌ಲಾನುಭವಿಗಳು ಜಮೀನು ಪಡೆಯಲು ಅರ್ಹರು. ಅಂತಹವರಿಗೆ ಸಾಗುವಳಿ ಚೀಟಿ ನೀಡುವುದು ಸರಕಾರದ ಕರ್ತವ್ಯ. ಒಂದು ವೇಳೆ ಅರ್ಜಿ ಸಲ್ಲಿಸಿದವರು ಮೃತಪಟ್ಟಿದ್ದರೆ, ಅವರಿಗೆ ಸಂಬಂಧಿಸಿದ ಅರ್ಹ ಕುಟುಂಬಸ್ಥರಿಗೆ ಜಮೀನು ಮಂಜೂರುಗೊಳಿಸಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *