ಚಿತ್ತಾಪುರ: ತಾಲೂಕಿನ ಇಟಗಾ ಗ್ರಾಮದ ಸಮೀಪದ ಓರಿಯಂಟ್ ಸಿಮೆಂಟ್ ಕಂಪೆನಿಯಿಂದ ನಕಲಿ ಪತ್ರ ಸೃಷ್ಟಿಸಿ, ಕೆಎ.32 ಎಬಿ.2200 ಸಂಖ್ಯೆಯ ಲಾರಿ ಲೋಡ್ ಮಾಡುವುದನ್ನು ತಡೆಹಿಡಿದು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ ಕಂಪೆನಿಯ ಮುಖ್ಯಸ್ಥ ಸತ್ಯಬ್ರರ್ತ್ ವಿರುದ್ಧ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನ್ಯಾಯವಾದಿ, ಬಿಜೆಪಿ ಮುಖಂಡ ಅಶ್ವಥರಾಮ ರಾಠೋಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಸಿಪಿಐ ಕಚೇರಿಯಿಂದ ಹೋದ ನಕಲಿ ಪತ್ರವನ್ನು ಎಫ್’ಎಸ್’ಎಲ್ ಕಳುಹಿಸಿ ಸಮಗ್ರ ತನಿಖೆ ನಡೆಸಿದಾಗ ಮಾತ್ರ ಸತ್ಯಾಸತ್ಯತೆ ಹೊರಬರಲಿದೆ, ಫೇಕ್ ಲೆಟರ್ ಮಾಡುವುದಕ್ಕೆ ಯಾರ ಕುಮ್ಮಕ್ಕು ಹಾಗೂ ಯಾರ ಪಾತ್ರ ಇದೆ ಎಂಬುದು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಓರಿಯಂಟ್ ಸಿಮೆಂಟ್ ಕಂಪನಿಯಲ್ಲಿ ಉತ್ಪಾದಿಸುವ ಸಿಮೆಂಟನ್ನು ದಿನನಿತ್ಯ ಲಾರಿಗಳ ಮುಖಾಂತರ ಸಾಗಾಟ ಮಾಡಲಾಗುತ್ತಿದೆ. ಲಾರಿ ಸಂಖ್ಯೆ ಕೆಎ.32 ಎಬಿ.2200ಗೆ ತಮ್ಮ ಕಂಪನಿಯಲ್ಲಿ ಉತ್ಪಾದಿಸುವ ಸಿಮೆಂಟನ್ನು ಅಧಿಕ ಭಾರ ಮತ್ತು ಪರವಾನಿಗೆ ಇಲ್ಲದೆ ಓಡಾಡುತ್ತಿದೆ. ಅಂತಾ ದೂರುಗಳು ಬರುತ್ತಿದ್ದು, ಆದ್ದರಿಂದ ತಮ್ಮ ಕಂಪನಿಯಲ್ಲಿ ಸದರಿ ಲಾರಿ ಲೋಡಿಂಗ್ ಮಾಡುವುದನ್ನು ತಡೆಯಬೇಕು ಎಂದು ಸಿಪಿಐ ಕಚೇರಿಯಿಂದ ಅ.1 ರಂದು ಓರಿಯಂಟ್ ಸಿಮೆಂಟ್ ಕಂಪೆನಿಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಸಿಪಿಐ ಕಚೇರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ನ.6 ರಂದು ಅರ್ಜಿ ಸಲ್ಲಿಸಿದಾಗ ನಮಗೆ ನ.25 ರಂದು ಸದರಿ ಅರ್ಜಿ ಈ ಕಚೇರಿಯಿಂದ ಹೋದ ಬಗ್ಗೆ ಜಾವಕ ಪುಸ್ತಕದಲ್ಲಿ ನಮೂದು ಇರುವುದಿಲ್ಲ ಎಂದು ಉತ್ತರ ನೀಡಿದ್ದಾರೆ.
ಸದರಿ ಲಾರಿ ಲೋಡ್ ಮಾಡುವುದನ್ನು ಬ್ಲಾಕ್ ಮಾಡುವಂತೆ ಹಾಗೂ ವಾಹನ ಲೋಡ್ ಮಾಡುವುದನ್ನು ತಡೆಹಿಡಿಯುವಂತೆ ಚಿತ್ತಾಪುರ ಪೊಲೀಸ್ ಠಾಣೆಯಿಂದ ಯಾವುದೇ ರೀತಿಯ ಪತ್ರ ವ್ಯವಹಾರ ಮಾಡಿರುವುದಿಲ್ಲ ಎಂದು ಪಿಎಸ್‌ಐ ಅವರು ಸಹ ನ.5 ರಂದು ಹಿಂಬರಹ ನೀಡಿದ್ದಾರೆ. ಹೀಗಿರುವಾಗ ಕಂಪೆನಿಗೆ ನಕಲಿ ಪತ್ರ ಯಾರು ಕಳುಹಿಸಿದ್ದಾರೆ ಎಂಬುದು ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಚಿತ್ತಾಪುರದಲ್ಲಿ ಅನೇಕ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಅದನ್ನು ತಡೆಯುವುದನ್ನು ಬಿಟ್ಟು ನಕಲಿ ಪತ್ರ ನೀಡಿ ನಮಗೆ ವಿನಾಕಾರಣ ತೊಂದರೆ ನೀಡಿದ್ದಾರೆ, ಇದರಿಂದ ನಮಗೆ ಸಾಕಷ್ಟು ನಷ್ಟ ಉಂಟಾಗಿದೆ ಎಂದರು.
ಕಂಪನಿಯವರಿಗೆ ನೀಡಿದ ಪೋಲಿಸ್ ಇಲಾಖೆಯ ಪತ್ರ ನಕಲಿಯೋ ಅಸಲಿಯೋ ಎಂಬ ಅನುಮಾನ ಮೂಡಿದೆ. ಪೊಲೀಸ್ ಅಧಿಕಾರಿಯ ಸಹಿ ದುರ್ಬಳಕೆ ಮಾಡಿದವರು ಯಾರು ಎಂಬುದನ್ನು ಸಮಗ್ರ ತನಿಖೆ ಮಾಡಬೇಕು ಎಂದು ಪೋಲಿಸ್ ವರಿಷ್ಠಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅನೇಕ ಅಧಿಕಾರಿಗಳಿಗೆ ದೂರು ಸಲ್ಲಿಸಿದರು ಯಾರು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಲೋಡಿಂಗ್ ಬಂದ್ ಮಾಡಿದ್ದರಿಂದ ಲಾರಿಯ ಪ್ರತಿ ತಿಂಗಳು ಲಕ್ಷ ರೂಪಾಯಿಗೂ ಮೇಲ್ಪಟ್ಟು ಇಎಂಐ ತುಂಬಲು ಆಗುತ್ತಿಲ್ಲ. ಓರಿಯೆಂಟ್ ಸಿಮೆಂಟ್ ಕಂಪನಿಯ ಮುಖ್ಯಸ್ಥ ಸತ್ಯಭ್ರಹತ್ ಶರ್ಮಾ ಅವರಿಗೆ ನಮ್ಮ ಪಕ್ಷದ ಮುಖಂಡ ಮಣಿಕಂಠ ರಾಠೋಡ ಅವರು ಮೊಬೈಲ್ ಮೂಲಕ ಕರೆ ಮಾಡಿ ಕೇಳಿದರೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದಾರೆ. ಅದರ ಆಡಿಯೋ ಸಾಕ್ಷಿ ಇದೆ. ಜಾತಿ ನಿಂದನೆ ಪ್ರಕರಣೆ ದಾಖಲಿಸಲಾಗುದು. ಪೊಲೀಸ್ ಇಲಾಖೆಯ ನಕಲಿ ಸಹಿ ಮಾಡಿದವರಾರು ಎಂಬುದನ್ನು ಎಫ್‌ಎಸ್‌ಎಲ್ ತನಿಖೆ ಆಗಬೇಕು. ನಿರ್ಲಕ್ಷವಹಿಸಿದರೆ ಬಿಜೆಪಿ ಪಕ್ಷದ ಮುಖಂಡರ ಗಮನಕ್ಕೆ ತಂದು ಓರಿಯಂಟ್ ಸಿಮೆಂಟ್ ಕಂಪನಿ ವಿರುದ್ಧ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.