ಧಾರ್ಮಿಕ ಕಾರ್ಯಕ್ರಮದಿಂದ ಸಾಮರಸ್ಯ ವೃದ್ಧಿ: ಡಿವೈಎಸ್ಪಿ ಶಂಕರಗೌಡ ಪಾಟೀಲ್

ನಗರದ

ಸುದ್ದಿ ಸಂಗ್ರಹ ಶಹಾಬಾದ್
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ದಿವ್ಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ ಟ್ರಸ್ಟ್) ವತಿಯಿಂದ ಹಳೆ ಶಹಾಬಾದ ಬಡಾವಣೆಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಅತ್ಯಂತ ಭಕ್ತಿಭಾವದಿಂದ ಸಾಮೂಹಿಕ ಮಹಾಲಕ್ಷ್ಮಿ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.‌

ಕಾರ್ಯಕ್ರಮದ ಪ್ರಯುಕ್ತ ಸಿದ್ಧಪಡಿಸಲಾಗಿದ್ದ ಮಂಟಪದಲ್ಲಿ ನೂರಾರು ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ಏಕಕಾಲದಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಲಕ್ಷ್ಮಿ ದೇವಿಯ ಪೂಜೆ ನೆರವೇರಿಸಿದರು. ದೇವಿಗೆ ವಿಶೇಷ ಅರ್ಚನೆ, ಧೂಪ-ದೀಪ ಹಾಗೂ ಮಹಾಮಂಗಳಾರತಿ ನೆರವೇರಿಸಿ, ಲೋಕಕಲ್ಯಾಣಕ್ಕಾಗಿ ಮತ್ತು ಪ್ರತಿಯೊಬ್ಬರ ಆರ್ಥಿಕ ಮತ್ತು ಕೌಟುಂಬಿಕ ಅಭಿವೃದ್ಧಿಗಾಗಿ ಜಂಟಿ ಪ್ರಾರ್ಥನೆ ಸಲ್ಲಿಸಲಾಯಿತು.

ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಅವರು, ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಭಕ್ತಿ, ನಂಬಿಕೆ ಮತ್ತು ಪರಸ್ಪರ ಸಹಕಾರದ ಮನೋಭಾವ ಬೆಳೆಸುತ್ತವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೇವಲ ಆರ್ಥಿಕ ವ್ಯವಹಾರ ಅಥವಾ ಸಾಲ ನೀಡಿಕೆಗೆ ಸೀಮಿತವಾಗಿಲ್ಲ. ಗ್ರಾಮೀಣ ಭಾಗದ ಜನರಲ್ಲಿ ಧಾರ್ಮಿಕ ಚೈತನ್ಯ, ಭಕ್ತಿ ಮತ್ತು ನೈತಿಕ ಮೌಲ್ಯ ಜಾಗೃತ ಗೊಳಿಸುವಲ್ಲಿ ಸಾಮೂಹಿಕ ಪೂಜೆಗಳು ಮಹತ್ತರ ಪಾತ್ರ ವಹಿಸುತ್ತವೆ. ಇಂತಹ ಧರ್ಮಸಭೆಗಳು ಸಮಾಜದಲ್ಲಿ ಸೌಹಾರ್ದತೆ, ಪರಸ್ಪರ ನಂಬಿಕೆ ಮತ್ತು ಸೌಮ್ಯ ಭಾವನೆಯನ್ನು ಬೆಳೆಸುತ್ತವೆ ಎಂದು ಶ್ಲಾಘಿಸಿದರು.

ಯೋಜನಾಧಿಕಾರಿ ಗುರುರಾಜ ಮಾತನಾಡಿ, ಪೂಜ್ಯರ ಆಶಯದಂತೆ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದರ ಜೊತೆಗೆ, ಅವರಲ್ಲಿ ಆಧ್ಯಾತ್ಮಿಕ ಚಿಂತನೆ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸಾಮೂಹಿಕ ಪೂಜೆಯಲ್ಲಿ ಭಾಗವಹಿಸು ವುದರಿಂದ ಕೌಟುಂಬಿಕ ನೆಮ್ಮದಿ ಹೆಚ್ಚುತ್ತದೆ ಎಂದರು.

ಕಸಾಪ ತಾಲೂಕ ಕಾರ್ಯದರ್ಶಿ ಶರಣು ವಸ್ತ್ರ್ರದ್ ಅವರು ಲಕ್ಷ್ಮಿ ಪೂಜೆಯ ಮಹತ್ವದ ಬಗ್ಗೆ ಉಪನ್ಯಾಸ ನೀಡುತ್ತಾ ಧನ, ಸಂಪತ್ತು ಮಾತ್ರವಲ್ಲದೆ ಧಾನ್ಯ, ಧೈರ್ಯ, ಜ್ಞಾನ, ವಿಜಯ ಮತ್ತು ಸಂತಾನ ಸೇರಿದಂತೆ ಮುಂತಾದ ಜೀವನದ ಎಲ್ಲಾ ಸುಖಗಳನ್ನು ಕರುಣಿಸುವವಳು ಮಹಾಲಕ್ಷ್ಮಿ. ಲಕ್ಷ್ಮಿ ಪೂಜೆ ಮಾಡುವುದರಿಂದ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತವೆ ಎಂದರು.

ರಾಚೋಟೇಶ್ವರ ಸಂಸ್ಥಾನ ಮಠದ ಶಂಕರಯ್ಯ ಮಹಾಸ್ವಾಮಿಗಳು, ಬಸಮ್ಮ ಮಾತೋಶ್ರೀ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಂತೋಷ ಗೌಡ ಪಾಟೀಲ್, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ವಾಸುದೇವ ಚವ್ಹಾಣ್, ಮುಖಂಡರಾದ ಅಣ್ಣಾರಾವ ಹುಗ್ಗಿ, ಅರ್ಚಕ ಮಂಜುನಾಥಸ್ವಾಮಿ ವೇದಿಕೆ ಮೇಲಿದ್ದರು.

ದೇವಸ್ಥಾನ ಸಮಿತಿಯ ಅಧ್ಯಕ್ಷ ಬಸವರಾಜ ತರನಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಕಾರ್ಯಕ್ರಮದ ಪೂಜೆಯಲ್ಲಿ 140ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಹಸ್ರಾರು ಭಕ್ತಾದಿಗಳಿಗೆ ಹಾಗೂ ಸಂಘದ ಸದಸ್ಯರಿಗೆ ತೀರ್ಥಪ್ರಸಾದ ಮತ್ತು ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಗ್ರಾಮೀಣ ಭಾಗದ ಜಲಮೂಲಗಳನ್ನು ಸಂರಕ್ಷಿಸಲು ರಾಜ್ಯಾದ್ಯಂತ ನೂರಾರು ಹೂಳು ತುಂಬಿದ ಕೆರೆಗಳನ್ನು ದತ್ತು ಪಡೆದು, ಅಭಿವೃದ್ಧಿಪಡಿಸಿ ಪುನಶ್ಚೇತನಗೊಳಿಸಲಾಗುತ್ತಿದೆ. ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ, ಗ್ರಂಥಾಲಯ ಮತ್ತು ಮೂಲಸೌಕರ್ಯ ಒದಗಿಸುವುದರೊಂದಿಗೆ, ಅಗತ್ಯವಿರುವ ಶಾಲೆಗಳಿಗೆ ‘ಜ್ಞಾನದೀಪ’ ಯೋಜನೆಯಡಿ ಗೌರವ ಶಿಕ್ಷಕರನ್ನು ನೇಮಿಸಲಾಗುತ್ತದೆ. ಮದ್ಯಪಾನ ಮತ್ತು ಮಾದಕ ವ್ಯಸನದಿಂದ ಹಾಳಾಗುತ್ತಿರುವ ಕುಟುಂಬಗಳನ್ನು ರಕ್ಷಿಸಲು ರಾಜ್ಯಾದ್ಯಂತ ನಿರಂತರ ಉಚಿತ ಮದ್ಯವರ್ಜನ ಶಿಬಿರ ನಡೆಸಿ ಲಕ್ಷಾಂತರ ಜನರನ್ನು ಮುಖ್ಯವಾಹಿನಿಗೆ ತರಲಾಗಿದೆ. ಸಮಾಜದ ಅತ್ಯಂತ ಬಡ, ಅಸಹಾಯಕ ಮತ್ತು ನಿರಾಶ್ರಿತ ಕುಟುಂಬಗಳಿಗೆ
ಆಸರೆಯಾಗಿ ಮನೆ ಕಟ್ಟಿಸಿಕೊಡುವುದು ಮತ್ತು ಮಾಸಿಕ ಆರ್ಥಿಕ ನೆರವು ನೀಡುವ ಮಾನವೀಯ ಕಾರ್ಯಕ್ರಮವಾಗಿದೆ.

– ಶಂಕರಗೌಡ ಪಾಟೀಲ್, ಡಿವೈಎಸ್ಪಿ ಶಹಾಬಾದ್

ಕಾರ್ಯಕ್ರಮದಲ್ಲಿ ಅರ್ಚನಾ ಕುಲಗಡೆ, ಗೋಧಾವರಿ ಶಾಸ್ತ್ರಿ, ಕೃಷ್ಣಕುಮಾರ, ಸವಿತಾ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಯೋಜನೆಯ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಮತ್ತು ನೂರಾರು ಮಹಿಳಾ ಒಕ್ಕೂಟಗಳ ಸದಸ್ಯರು ಉಪಸ್ಥಿತರಿದ್ದರು..

ಕಾರ್ಯಕ್ರಮವನ್ನು ಸೇವಾ ಪ್ರತಿನಿಧಿ ಗುರುಬಾಯಿ ನಿರೂಪಿಸಿದರು, ಪವಿತ್ರಾ ಸ್ವಾಗತಿಸಿದರು ಮತ್ತು ಸದಾನಂದ ಪೂಜಾರಿ ವಂದಿಸಿದರು.

Leave a Reply

Your email address will not be published. Required fields are marked *