ಸುದ್ದಿ ಸಂಗ್ರಹ ಯಡ್ರಾಮಿ
ತಾಲೂಕಿನ ಕಾಖಂಡಕಿ ಸದ್ಗುರು ಮಲ್ಲಾರಾಧ್ಯರ ಮತ್ತು ಮಹಾತ್ಮಾ ಕೋರಿಸಿದ್ಧೇಶ್ವರ ಭವ್ಯ ರಥೋತ್ಸವ ರವಿವಾರ ರಾತ್ರಿ ಸಹಸ್ರಾರು ಭಕ್ತರ ನಡುವೆ ಅದ್ಧೂರಿಯಾಗಿ ಜರುಗಿತು.
ನಾಲವಾರ- ಕಾಖಂಡಕಿ ಉಭಯ ಮಠಗಳ ಪೀಠಾಧಿಪತಿ ಡಾ.ಸಿದ್ದತೋಟೇಂದ್ರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಸಂಜೆ ಭವ್ಯ ರಥೋತ್ಸವ ಜರುಗಿತು.
ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಂದ ಮಲ್ಲಾರಾಧ್ಯ ಮಹಾರಾಜ್ ಕೀ, ಕೋರಿಸಿದ್ಧೇಶ್ವರ ಮಹಾರಾಜ್ ಕೀ, ತೋಟೇಂದ್ರ ಮಹಾರಾಜ್ ಕೀ ಜೈ ಎಂಬ ಜಯಘೋಷ ಮುಗಿಲು ಮುಟ್ಟುವಂತಿತ್ತು. ಈ ಮಧ್ಯೆ ಶ್ರೀಮಠದ ಭಕ್ತರಾದ ನರಸಯ್ಯ ಗುತ್ತೇದಾರ ಇವರಿಂದ ನಡೆದ ಮದ್ದು ಸುಡುವ ಕಾರ್ಯಕ್ರಮ ಬಾನಂಗಳದಲ್ಲಿ ಚಿತ್ತಾರ ಮೂಡಿಸಿತು.
ವಿಜಯಕುಮಾರ ಪವಾರ ರಥೋತ್ಸವಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಿದ್ದರು. ಬಾಬು ರಾಠೋಡ ರಥೋತ್ಸವಕ್ಕೆ ದೀಪಾಲಂಕಾರ ವಿಶೇಷ ಆಕರ್ಷಣೆಯಾಗಿ ಕಂಗೊಳಿಸಿತು. ಗುಂಡು ಕಸನು ಪವಾರ ಅವರಿಂದ ರಥೋತ್ಸವಕ್ಕೆ 20 ಅಡಿ ಎತ್ತರದ 5 ಲಕ್ಷ ರುದ್ರಾಕ್ಷಿಗಳಿಂದ ಮಾಡಿದ ಬೃಹತ್ ಮಾಲೆ ಅರ್ಪಿಸಿದರು. ಕೇರಳ ರಾಜ್ಯದ ಚಂಡಿ ಮಂಗಲ ವಾದನ ಸೇರಿದ ಭಕ್ತರನ್ನು ನಾದದಲ್ಲಿ ತೇಲಿಸಿತು. ರಥ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತಸ್ತೋಮ ಬಾಳೆಹಣ್ಣು-ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ಶ್ರೀಕ್ಷೇತ್ರ ಕಾಖಂಡಕಿಯ ಸದ್ಗುರು ಮಲ್ಲಾರಾಧ್ಯ ಕೋರಿಸಿದ್ಧೇಶ್ವರ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠದ ಪಾರಂಪರಿಕ ಉಡುಪು ಧರಿಸಿ, ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ರಥ ಏರುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು.
ಸದ್ಗುರು ಮಲ್ಲಾರಾಧ್ಯ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಜಾತ್ರೆಗೆ ಸುಮಾರು 300 ವರ್ಷಗಳ ಇತಿಹಾಸವಿದೆ. ಈ ಸಂಧರ್ಭದ ಪೂರ್ವದಲ್ಲಿ ಶ್ರೀಮಠದ ಸದ್ಭಕ್ತರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು, ಶಾಸಕರಾದ ಡಾ.ಅಜಯಸಿಂಗ್, ನಾಲವಾರ ಶಾಖಾಮಠದ ಶಾಂತಾರುದ್ರಮುನಿ ಸ್ವಾಮಿಗಳು ಕರಡಕಲ್ಲ, ಸಿದ್ಧ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮುದನೂರ, ರಾಜಶೇಖರಾನಂದ ಸ್ವಾಮಿಜಿ ಮಶಾಳ (ಬಸವನ ಬಾಗೇವಾಡಿ), ಸಿದ್ಧರಾಮ ಸ್ವಾಮಿಜಿ ಜಮ್ಮಲದಿನ್ನಿ, ಕುಂಬಾರ ಗುಂಡಯ್ಯ ಸ್ವಾಮೀಜಿ ಯಳಸಂಗ ಬೆಳಗಾವಿ ಭಾಗವಹಿಸಿದ್ದರು.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು, ದರ್ಶನಾಶಿರ್ವಾದ ಪಡೆದರು.