ಸುದ್ದಿ ಸಂಗ್ರಹ ಕಲಬುರಗಿ
ಗುಲಬರ್ಗಾ ವಿವಿ ಕುಲಪತಿಗೆ ದುಷ್ಕರ್ಮಿಗಳು ಆ್ಯಸಿಡ್ ಹಾಕುವ ಬೆದರಿಕೆ ಪತ್ರ ಕಳಿಸಿದ್ದಾರೆ. ಶಶಿಕಾಂತ್ ಎಸ್.ಉಡಿಕೇರಿ ಅವರಿಗೆ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ಬಿಇಡಿ ಪರೀಕ್ಷೆಯ ಮರು ಮೌಲ್ಯಮಾಪನದ ನಿರ್ಧಾರ ನಮಗೆ ಇಷ್ಟವಾಗಿಲ್ಲ. ಎರಡು ಲಕ್ಷ ರೂ. ನೀಡಿ ಬಿಇಡ್ ಪ್ರವೇಶ ಪಡೆದು, ಎರಡು ವರ್ಷದಿಂದ ಫಲಿತಾಂಶಕ್ಕಾಗಿ ಕಾದಿದ್ದೆವೆ. ಮರು ಮೌಲ್ಯಮಾಪನದಿಂದ ಫಲಿತಾಂಶದಲ್ಲಿ ಅಂಕಗಳು ಕಡಿಮೆಯಾದರೆ ಅಥವಾ ಮರು ಮೌಲ್ಯಮಾಪನದಲ್ಲಿ ಅನುತ್ತಿರ್ಣರಾದರೆ ನಿಮ್ಮ ಮುಖಕ್ಕೆ ಆ್ಯಸಿಡ್ ಹಾಕಿ ನರಳಿ ನರಳಿ ಬದುಕುವಂತೆ ಮಾಡುತ್ತೆವೆ ಎಂದು ಬರೆಯಲಾಗಿದೆ. ಅನಾಮಧೇಯ ಪತ್ರದ ವಿಚಾರವಾಗಿ ಕುಲಪತಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ನಿರ್ದೇಶನದಂತೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
2024ರಲ್ಲಿ ನಡೆದ ಬಿಇಡ್ ಮೌಲ್ಯಮಾಪನದಲ್ಲಿ ಅಕ್ರಮದ ಬಗ್ಗೆ ಗುರುತಿಸಿ ಸರ್ಕಾರ ಮತ್ತು ರಾಜ್ಯಪಾಲರ ಗಮನಕ್ಕೆ ವಿಸಿ ತಂದಿದ್ದರು. ಮೌಲ್ಯಮಾಪನದಲ್ಲಿ ಅಕ್ರಮವಾಗಿ ಅಂಕ ತಿದ್ದುಪಡಿ ಮಾಡಿರುವದು ವಿವಿ ಆಂತರಿಕ ಸಮಿತಿ ತನಿಖೆಯಲ್ಲಿ ತಿಳಿದು ಬಂದಿತ್ತು. ಬಳಿಕ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆಯಾಗಿತ್ತು. ಸಮಿತಿಯ ಆದೇಶದಂತೆ ಮರುಮೌಲ್ಯಮಾಪನ ಪ್ರಕ್ರಿಯೆ ನಡೆದಿದೆ.