SSLC ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲಿಯೇ ಫೇಲ್ ಆಗ್ತಿರೋದೆಕೆ ?: ಅಚ್ಚರಿಯ ಮಾಹಿತಿ ಬಹಿರಂಗ
ಸುದ್ದಿ ಸಂಗ್ರಹ ಬೆಂಗಳೂರು
2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಂಡಿದ್ದ ಸುಮಾರು 19,000 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಹೀಗಾಗಿ ಇದಕ್ಕೆ ಕಾರಣಗಳನ್ನು ಅಧ್ಯಯನ ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದ ಸಮಿತಿ ಹಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ. ಕನಿಷ್ಠ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸರ್ಕಾರದ ಉದ್ಯೋಗಗಳಲ್ಲಿ ಶೇ. 25ರಷ್ಟು ಮೀಸಲಾತಿ ನೀಡಬೇಕು ಎಂದು ಸಮಿತಿ ಹೇಳಿದ್ದು, ಇದರಿಂದ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಉತ್ತೇಜನ ಸಿಗಲಿದೆ ಎಂದು ತಿಳಿಸಿದೆ.
ವಿದ್ಯಾರ್ಥಿಗಳ ಅನುತ್ತೀರ್ಣಕ್ಕೆ ಕಾರಣವೇನು?
ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮಗಳ ನಡುವಿನ ಏಕರೂಪತೆಯ ಕೊರತೆ, ಶಿಕ್ಷಣದ ವಿವಿಧ ಹಂತಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸದಿರುವುದು, ಪ್ರಾಥಮಿಕ ಹಂತದಿಂದಲೇ ಕಲಿಕೆ ಫಲಿತಾಂಶ ಅಳೆಯುವ ಪರೀಕ್ಷೆಗಳ ಕೊರತೆ, ಕನ್ನಡದಲ್ಲಿ ಸಾಧನೆ ಮಾಡುವವರಿಗೆ ಪ್ರೋತ್ಸಾಹ ಸಿಗದಿರುವುದು, ಭಾಷಾ ಕಲಿಕೆಗೆ ಅನುಕೂಲಕರವಲ್ಲದ ಪಠ್ಯಪುಸ್ತಕಗಳೇ ವಿದ್ಯಾರ್ಥಿಗಳ ಅನುತ್ತೀರ್ಣತೆಗೆ ಪ್ರಮುಖ ಕಾರಣಗಳೆಂದು ವರದಿ ಹೇಳಿದೆ.
ಸಮಿತಿಯ ಶಿಫಾರಸುಗಳೇನು ?
* ತ್ರಿ ಭಾಷಾ ನೀತಿ ರದ್ದುಗೊಳಿಸಿ ದ್ವಿಭಾಷಾ ನೀತಿ ಅನುಸರಿಸುವುದು.
ಪ್ರಾಥಮಿಕ ಹಂತದಿಂದಲೇ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪಾರಂಗತತೆ ಕಲ್ಪಿಸುವುದು.
* ಭಾಷಾ ಪರಿಣತಿ, ತರಬೇತಿ ಹೊಂದಿದ ಶಿಕ್ಷಕರ ನೇಮಕ
* ಕನ್ನಡದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಉನ್ನತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಆದ್ಯತೆ
* ವಿಷಯಾಧಾರಿತ ಪಠ್ಯಗಳ ಬದಲು ಭಾಷಾ ಕಲಿಕೆಗೆ ಒತ್ತು ನೀಡುವ ಪಠ್ಯಪುಸ್ತಕ ರಚನೆ
ಡಾ. ನಿರಂಜನಾರಾಧ್ಯ ವಿ.ಪಿ ನೇತೃತ್ವದ ಸಮಿತಿ ಕಳೆದ 10 ವರ್ಷಗಳ ಅಂಕಿ-ಅಂಶಗಳನ್ನು ಪರಿಶೀಲಿಸಿ, ರಾಜ್ಯದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸ್ಥಿತಿಯನ್ನು ಅಧ್ಯಯನ ಮಾಡಿ ಈ ಶಿಫಾರಸುಗಳನ್ನು ನೀಡಿದೆ. ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ‘ಕನ್ನಡದಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿರುವ ಕಾರಣಗಳು ಮತ್ತು ಅಗತ್ಯ ಸುಧಾರಣೆಗಳು’ ಕುರಿತ ವರದಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಸಲ್ಲಿಕೆ ಮಾಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.