ಸುದ್ದಿ ಸಂಗ್ರಹ ಕಲಬುರಗಿ
ಶಹಾಬಾದ್ ಮತ್ತು ಆಳಂದ ಉಪವಿಭಾಗದ ವಿವಿಧ
ಪೊಲೀಸ್ ಠಾಣೆಗಳ ವ್ಯಾಪ್ತಿಯ 17 ಕಳವು ಪ್ರಕರಣಗಳನ್ನು ಭೇದಿಸಿರುವ ಜಿಲ್ಲಾ ಪೊಲೀಸರು, 6 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 31.41 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಕುಖ್ಯಾತ ಮನೆಗಳ್ಳರ ಬಂಧನ: ಕಾಳಗಿ ಪೊಲೀಸ್ ಠಾಣೆ ವ್ಯಾಪ್ತಿಯ ಟೆಂಗಳಿ ಗ್ರಾಮದಲ್ಲಿ ನಡೆದ ಮನೆ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆಳಂದ ತಾಲೂಕಿನ ಕಮಸರನಾಯಕ ತಾಂಡಾದ ಅಪ್ಪಾಜಿ ಗಂಗಾರಾಮ ಚವ್ಹಾಣ (22) ಹಾಗೂ ಮಿಥುನ ಲಕ್ಷ್ಮಣ ಚವ್ಹಾಣ (23) ಬಂಧಿತರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲೂ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಬ್ಬರು ಆರೋಪಿಗಳು ಹಗಲಿನಲ್ಲಿ ಕಬ್ಬು ಕಟಾವು ಕೆಲಸ
ಮಾಡುತ್ತಿದ್ದರು.ತಾವು ಕಬ್ಬು ಕಟಾವಿಗೆ ಹೋಗುವ ಸುತ್ತಲಿನ ಗ್ರಾಮಗಳ ಕೀಲಿ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ಹೊತ್ತು ಕನ್ನ ಹಾಕುತ್ತಿದ್ದರು, ಬಂಗಾರ ಬೆಳ್ಳಿಯನ್ನು ಮಹಾರಾಷ್ಟ್ರದ ವಿವಿಧೆಡೆ ಮಾರಾಟ ಮಾಡುತ್ತಿದ್ದರು ಎಂದು ವಿವರಿಸಿದರು.
ಈ ಆರೋಪಿಗಳ ಪತ್ತೆಗೆ ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಮಾರ್ಗದರ್ಶನದಲ್ಲಿ ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಕಾಳಗಿ ಪಿಎಸ್ಐ ತಿಮ್ಮಯ್ಯ, ಮಾಡಬೂಳ ಪಿಎಸ್ಐ ಗೌತಮ ಹಾಗೂ ಕ್ರೈಂ ಪಿಎಸ್ಐ ಸಿದ್ದಲಿಂಗ ಸಿಂಗಶೆಟ್ಟಿ ಸೇರಿದಂತೆ ಸಿಬ್ಬಂದಿ ಒಳಗೊಂಡ ಮೂರ್ನಾಲ್ಕು ತಂಡಗಳನ್ನು ರಚಿಸಲಾಗಿದ್ದು. ಆ ತಂಡಗಳು ಟೆಂಗಳಿ ಗ್ರಾಮದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿವೆ. ಅವರ ಬಂಧನದಿಂದ 2023-26ರ ಅವಧಿಯಲ್ಲಿ ನಡೆದ ಇತರ 8 ಪ್ರಕರಣಗಳು ಪತ್ತೆಯಾದಂತ್ತಾಗಿವೆ. ಒಟ್ಟು 119 ಗ್ರಾಂ ಚಿನ್ನಾಭರಣ, 85 ಗ್ರಾಂ ಬೆಳ್ಳಿ ಆಭರಣ ಹಾಗೂ 28 ಸಾವಿರ ನಗದು ಸೇರಿದಂತೆ ಒಟ್ಟು 18.46 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ, ಅವರಿಂದಲೂ ಚಿನ್ನ, ಬೆಳ್ಳಿ ಆಭರಣಗಳು ಜಪ್ತಿ ಬಾಕಿಯಿದೆ ಎಂದರು.
ಧನಗಳ್ಳರ ಬಂಧನ: ಆಳಂದ ತಾಲೂಕಿನ ಚಿಂಚನಸೂರ ಗ್ರಾಮದ ಗೋರಖನಾಥ ಸಜ್ಜನ್ ಎಂಬುವವರ ಒಂದು ಆಕಳ ಕರು ಹಾಗೂ ಎರಡು ಹೋರಿಗಳು ಕಳುವಾದ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಗೆ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್ ಹಾಗೂ ಆಳಂದ ಡಿವೈಎಸ್ಪಿ ತಮ್ಮಾರಾಯ ಪಾಟೀಲ ಮಾರ್ಗದರ್ಶನದಲ್ಲಿ ಆಳಂದ ಸಿಪಿಐ ಜಗದೀಶ ಕೆ.ಜಿ, ಪಿಎಸ್ಐಗಳಾದ ಸಿದ್ಧರಾಮ ಹಾಗೂ ಸಂಗಮೇಶ ಅಂಗಡಿ ಮತ್ತು ಸಿಬ್ಬಂದಿಯ ತಂಡ ರಚಿಸಲಾಗಿತ್ತು ಎಂದು ಅಡ್ಡೂರು ಶ್ರೀನಿವಾಸಲೂ ಹೇಳಿದರು.
ಈ ತಂಡವು ವೈಜ್ಞಾನಿಕ ಹಾಗೂ ತಾಂತ್ರಿಕ ಪುರಾವೆಗಳ ಆಧಾರದಲ್ಲಿ ಪ್ರಕರಣವನ್ನು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದೆ. ಕಮಲಾಪುರ ಗ್ರಾಮದ ಶಿವಶರಣ ಬೇನೂರ (54), ಫಾರೂಕ್ ಖುರೇಶಿ (35) ಹಾಗೂ ಕುರಿಕೋಟಾದ ರಬ್ಬಾನಿ ಅತ್ತಾರ (36) ಬಂಧಿತರು. ಅವರಿಂದ ದನಗಳ ಮಾರಾಟದಿಂದ ಬಂದಿದ್ದ 2.15 ಲಕ್ಷ ನಗದು ಹಾಗೂ ದನಗಳ ಸಾಗಣೆಗೆ ಬಳಸಿದ್ದ 2 ಲಕ್ಷ ಮೌಲ್ಯದ ವಾಹನ ಜಪ್ತಿ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ವಿವರಿಸಿದರು.
‘ಶಿವಶರಣಪ್ಪ ಎಂಬಾತ ಗೋರಖನಾಥ ಎಂಬುವರ ಬಳಿ ಕೂಲಿ ಕೆಲಸ ಮಾಡುತ್ತಿದ್ದ. ಫಾರೂಕ್ ಹಾಗೂ ರಬ್ಬಾನಿ ಮೂಲತಃ ದನಗಳನ್ನು ಮಾರುವ ದಲ್ಲಾಳಿಗಳು. ದುಡ್ಡಿನ ಆಸೆಗಾಗಿ ಶಿವಶರಣಪ್ಪ ತಮಗೆ ಪರಿಚಯದ ಫಾರೂಕ್ ಹಾಗೂ ರಬ್ಬಾನಿ ಜೊತೆಗೂಡಿ ದನಗಳನ್ನು ಕದ್ದು ಮಾರಾಟ ಮಾಡಿ ಹಣವನ್ನು ಹಂಚಿಕೊಳ್ಳೋಣ ಎಂದು ಸಂಚು ರೂಪಿಸಿದ್ದ’ ಎಂದು ಶ್ರೀನಿವಾಸುಲು ಮಾಹಿತಿ ನೀಡಿದರು
“ಆರೋಪಿಗಳಾದ ಫಾರೂಕ್ ಹಾಗೂ ರಬ್ಬಾನಿ ವಿರುದ್ಧ ಈ ಹಿಂದೆಯೂ ರಸ್ತೆ ಬದಿಯಲ್ಲಿ ಕಟ್ಟಿದ್ದ ಹಾಗೂ ಮೇಯಲು ಬಿಟ್ಟಿದ್ದ ದನಗಳನ್ನು ಕದ್ದು ಮಾರಾಟ ಮಾಡಿರುವ ಕುರಿತು ಇನ್ನೂ ಮೂರು ಪ್ರಕರಣಗಳು ದಾಖಲಾಗಿವೆ. ಬೆಳಮಗಿ ಗ್ರಾಮದಲ್ಲಿ 3 ಆಕಳು ಕದ್ದಿರುವ ಕುರಿತು 2026ರ ಮಾರ್ಚ್ 13ರಂದು ನರೋಣಾ ಠಾಣೆಯಲ್ಲಿ, ಕಲಮೂಡದಲ್ಲಿ ಎರಡು ಎತ್ತು, ಒಂದು ಹೋರಿ, ಒಂದು ಆಕಳ ಕರು ಕದ್ದ ಕುರಿತು 2026ರ ಮಾರ್ಚ್ 25ರಂದು ಕಮಲಾಪುರ ಠಾಣೆಯಲ್ಲಿ ಹಾಗೂ ದಮ್ಮೂರ ಗ್ರಾಮದಲ್ಲಿ ಒಂದು ಆಕಳು ಕದ್ದಿರುವ ಕುರಿತು 2026ರ ಫೆಬ್ರುವರಿ 22ರಂದು ಮಹಾಗಾಂವ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಇವರ ಬಂಧನದಿಂದ ಒಟ್ಟು 4 ಪ್ರಕರಣಗಳು ಪತ್ತೆಯಾಗಿವೆ’ ಎಂದರು.
ಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ್, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಆಳಂದ ಡಿವೈಎಸ್ಪಿ ತಮ್ಮಾರಾಯ ಪಾಟೀಲ, ಸಿಪಿಐಗಳಾದ ಜಗದೇವಪ್ಪ ಪಾಳಾ, ಜಗದೀಶ ಕೆ.ಜಿ, ಎಸ್.ಸಿ ಪಾಟೀಲ ಸೇರಿದಂತೆ ಪಿಎಸ್‌ಐಗಳು, ಎಎಸ್‌ಐಗಳು ಮತ್ತು ಸಿಬ್ಬಂದಿ ಇದ್ದರು.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳಿಗೆ, ಸಿಬ್ಬಂದಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು.