ಸುದ್ದಿ ಸಂಗ್ರಹ ಚಿತ್ತಾಪುರ
ಜಗಜ್ಯೋತಿ ಬಸವಣ್ಣನವರ ಕಾಯಕ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ತತ್ವಾದರ್ಶಗಳ ಆಧಾರದ ಮೇಲೆಯೇ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದ ಹೊರವಲಯದ ರಾವೂರ ರಸ್ತೆಯಲ್ಲಿ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಬಸವ ಭವನ ಹಾಗೂ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಸಾರಿದ ‘ಕಾಯಕವೇ ಕೈಲಾಸ’ ಎಂಬ ತತ್ವದಂತೆ ಕಾಂಗ್ರೆಸ್ ಸರ್ಕಾರ ಕಟ್ಟಕಡೆಯ ವ್ಯಕ್ತಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿ, ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ ಎಂದರು.
ನಾನು ಬಸವಣ್ಣನವರ ಅನುಯಾಯಿಯಾಗಿದ್ದು, ಅವರು ಸಾರಿದ ‘ಕಾಯಕವೇ ಕೈಲಾಸ’ ಎಂಬ ವಚನದ ಆಶಯದಂತೆ ಕೆಲಸ ಮಾಡುತ್ತಿದ್ನೆನೆ. ಮಹನೀಯರ ಜಯಂತಿಗಳಿಗೆ ಸರ್ಕಾರಿ ರಜೆ ನೀಡುವ ಬದಲು ಶಾಲೆಗಳಲ್ಲಿ ಜಯಂತಿ ಆಚರಿಸಿ, ಅವರ ಜೀವನ, ತತ್ವಾದರ್ಶ ಮತ್ತು ವಚನಗಳ ಕುರಿತು ಮಕ್ಕಳಿಗೆ ತಿಳಿಸಬೇಕು ಎಂಬುದು ನನ್ನ ಆಶಯ. ಇದರಿಂದ ಮುಂದಿನ ಪೀಳಿಗೆಗೆ ಮಹನೀಯರ ವಿಚಾರಧಾರೆಗಳು ತಲುಪುತ್ತವೆ ಎಂದರು.
ಕಾಯಕವೇ ಕೈಲಾಸ ಎನ್ನುವುದನ್ನು ಕೇವಲ ಹೇಳುವುದಲ್ಲ, ಅದನ್ನು ಕಾರ್ಯರೂಪಕ್ಕೆ ತರುವುದು ನಮ್ಮ ಜವಾಬ್ದಾರಿಯಾಗಿದೆ. ಜನರು ನನ್ನನ್ನು ಆಯ್ಕೆ ಮಾಡಿ ಸಚಿವ ಸ್ಥಾನ ನೀಡಿರುವುದು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಲು ಹೊರತು, ಪ್ರತಿಯೊಂದು ಜಯಂತಿ, ಕುಂಭಸ್ನಾನ, ನಾಮಕರಣ ಮತ್ತು ಮದುವೆ ಕಾರ್ಯಕ್ರಮಗಳಿಗೆ ಹಾಜರಾಗುವುದಕ್ಕಲ್ಲ. ಕಳೆದ ಹತ್ತರಿಂದ ಹನ್ನೆರಡು ವರ್ಷಗಳ ಹಿಂದೆ ಚಿತ್ತಾಪುರ ಹೇಗಿತ್ತು, ಈಗ ಹೇಗೆ ಬದಲಾಗಿದೆ ಎಂಬುದನ್ನು ಜನರು ಗಮನಿಸಬೇಕು. ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲಾಗಿದೆ. ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿದೆ. ಕ್ಷೇತ್ರ ಸಂಪೂರ್ಣ ಅಭಿವೃದ್ಧಿಯಾಗಿದೆ ಎಂದು ಹೇಳುವುದಿಲ್ಲ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದಕ್ಕಿಂತ ಜನರಿಗಾಗಿ ಕೆಲಸ ಮಾಡುವುದೇ ನನ್ನ ಆದ್ಯತೆಯಾಗಿದೆ ಎಂದರು.
ಚಿತ್ತಾಪುರದಲ್ಲಿ ಬಸವ ಭವನ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಿಸಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂಟಪಗಳು ಹಾಗೂ ವಸತಿ ನಿಲಯಗಳನ್ನು ನಿರ್ಮಿಸೋಣ. ಕಲಬುರಗಿಯಲ್ಲಿ ಸುಮಾರು 50ರಿಂದ 60 ಕೋಟಿ ರೂ. ವೆಚ್ಚದಲ್ಲಿ ಆರು ಎಕರೆ ಜಾಗದಲ್ಲಿ ಬೃಹತ್ ಬಸವ ವಚನ ಮಂಟಪ ನಿರ್ಮಿಸಲಾಗುತ್ತಿದೆ. ಮುಂದಿನ ಒಂದೂವರೆ ತಿಂಗಳಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಚಿವ ಈಶ್ವರ ಖಂಡ್ರೆ ಮಾತನಾಡಿ, ಬಸವಣ್ಣನವರ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಸಮಾಜದಲ್ಲಿ ಏಕತೆ ಮತ್ತು ಸಮಾನತೆ ಸ್ಥಾಪಿಸಲು ಅವರು ಮಹಾನ್ ಕ್ರಾಂತಿಯನ್ನೆ ಮಾಡಿದ್ದರು. ಕಾಯಕದಲ್ಲಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮಾನತೆಯಿಂದ ಬದುಕುವ ಮಾರ್ಗವನ್ನು ತೋರಿಸಿಕೊಟ್ಟ ಮಹಾನ್ ಚೇತನ ಬಸವಣ್ಣನವರು ಎಂದರು.
ಚಿತ್ತಾಪುರದಲ್ಲಿ ಬಸವ ಭವನ ಹಾಗೂ ಬಾಲಕಿಯರ ವಸತಿ ನಿಲಯ ನಿರ್ಮಿಸಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಬಾಲಕರ ವಸತಿ ನಿಲಯ ನಿರ್ಮಾಣಕ್ಕೂ ಶ್ರಮಿಸಬೇಕು. ಅದಕ್ಕೆ ನನ್ನಿಂದ ಅಗತ್ಯ ಸಹಾಯ ಮತ್ತು ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಚಿತ್ತಾಪುರ-ಸೇಡಂನ ಶಿವಶಂಕರ ಶಿವಾಚಾರ್ಯರು, ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು, ದಿಗ್ಗಾಂವದ ಸಿದ್ಧವೀರ ಶಿವಾಚಾರ್ಯರು, ಹಲಕರ್ಟಿಯ ರಾಜಶೇಖರ ಶಿವಾಚಾರ್ಯರು, ಬೆಳಗುಂಪಾದ ಪರಮೇಶ್ವರ ಶಿವಾಚಾರ್ಯರು, ರಾವೂರಿನ ಸಿದ್ಧಲಿಂಗ ಶಿವಾಚಾರ್ಯರು, ಮುಗುಳನಾಗಾಂವದ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಅಳ್ಕೊಳ್ಳಿಯ ಸಂಗಮನಾಥ ದೇವರು, ಮಾಲಗತ್ತಿಯ ಚನ್ನಬಸವ ಶರಣರು ಮತ್ತು ಕಂಚಗಾರಹಳ್ಳದ ಮಲ್ಲಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮತ್ತು ಟ್ರಸ್ಟ್ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿದರು.
ಶಾಸಕ ಎಂ.ವೈ ಪಾಟೀಲ, ಶರಣು ಮೋದಿ, ಸೈಯದ್ ಮಹೇಮೂದ್ ಸಾಹೇಬ್, ಶಿವಾನಂದ ಪಾಟೀಲ ಮರತೂರ, ಪ್ರವೀಣ ಪಾಟೀಲ ಹರವಾಳ, ಚಂದ್ರಶೇಖರ ಸಾತನೂರ, ಅಣ್ಣಾರಾವ ಪಾಟೀಲ ಮುಡಬೂಳ, ಡಾ. ಪ್ರಭುರಾಜ ಕಾಂತಾ, ಪ್ರಭುದೇವ ಬೊಮ್ಮನಳ್ಳಿ, ಶರಣು ಸಜ್ಜನಶೆಟ್ಟಿ, ಅನಿಲ ವಡ್ಡಡಗಿ, ಚಂದ್ರಕಾಂತ ಪಾಟೀಲ, ಅಶೋಕ ನಿಪ್ಪಾಣಿ, ಶಾಂತಕುಮಾರ ಹತ್ತಿ, ಶಿವರೆಡ್ಡಿಗೌಡ ಪಾಲಪ, ಶರಣಗೌಡ ಪಾಟೀಲ, ಬಸವರಾಜ ಪಾಟೀಲ ಹೇರೂರ, ಬಸವರಾಜ ಶಿವಗೋಳ, ಭಾಗಣ್ಣಗೌಡ ಸಂಕನೂರ, ಭೀಮಣ್ಣ ಸಾಲಿ, ಸಿದ್ದುಗೌಡ ಅಫಜಲಪುರಕರ್, ವೀರಭದ್ರಪ್ಪ ಗಡ್ಡದ, ಪ್ರಕಾಶ ಹಂಚನಾಳ, ಮಲರೆಡ್ಡಿ ಗೋಪಸೇನ, ಮಲ್ಲಣ್ಣ ಬೊಮ್ಮನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭೂಮಿ ದಾನಿಗಳು ಮತ್ತು ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಸ್ವಾಗತಿಸಿದರು. ವಿಶ್ವರಾಧ್ಯ ಪಾಟೀಲ ಕರದಾಳ ನಿರೂಪಿಸಿದರು. ವೀರೇಶ ಮಕಾಪ ವಂದಿಸಿದರು.