ಸುದ್ದಿ ಸಂಗ್ರಹ ಕಲಬುರಗಿ
ನಗರದ ಹೊರವಲಯದ ಉದನೂರು ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಿಸಿದ ನಿವೇಶನ ವಿವಾದ ಪರಿಹರಿಸಲು ವ್ಯಕ್ತಿಯೊಬ್ಬರಿಂದ 30 ಸಾವಿರ ರೂ ಲಂಚ ಪಡೆದಿದ್ದ ಪೊಲೀಸ್ ಕಾನ್‌ಸ್ಟೆಬಲ್‌ಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಬುಧವಾರ ಐದು ವರ್ಷ ಜೈಲು ಮತ್ತು 60 ಸಾವಿರ ರೂ ದಂಡ ವಿಧಿಸಿದೆ.
ಮೂಲತಃ ಸೇಡಂ ತಾಲೂಕಿನ ಬೆಟಗೇರಾ ಗ್ರಾಮದ ನಿವಾಸಿ ಭೀಮಾ ನಾಯಕ ಶಿಕ್ಷೆಗೆ ಗುರಿಯಾದ ಅಪರಾಧಿ.
ನಗರದ ಬ್ರಹ್ಮಪುರ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದ ಭೀಮಾ ನಾಯಕ ಲಂಚಕ್ಕೆ ಬೇಡಿಕೆ ಇಟ್ಟ ಕುರಿತು ರಿಯಲ್ ಎಸ್ಟೇಲ್ ಉದ್ಯಮಿ ಅಬ್ದುಲ್ ಮಜೀದ್ ಮುಸ್ತಫಾ ನೀಡಿದ ದೂರನ್ನು ಲೋಕಾಯುಕ್ತ (ಆಗಿನ ಎಸಿಬಿ) ಡಿವೈಎಸ್‌ಪಿ ಸಂತೋಷ ಬನ್ನಟ್ಟಿ ದೂರು ದಾಖಲಿಸಿಕೊಂಡಿದ್ದರು. ಭೀಮಾ ನಾಯಕ 2022ರ ಜೂನ್ 9ರಂದು ಲಂಚ ಪಡೆಯುವಾಗ ಲೋಕಾಯುಕ್ತ ಇನ್‌ಸ್ಪೆಕ್ಟರ್ ಬಾಬಾಸಾಹೇಬ ಪಾಟೀಲ ಕೈಗೆ ಸಿಕ್ಕಿಬಿದ್ದಿದ್ದರು. ಈ ಕುರಿತು ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಇನ್‌ಸ್ಪೆಕ್ಟರ್ ಅಕ್ಕಮಹಾದೇವಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.