ಬರಗಾಲದ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆ: ಜನರಿಗೆ ಸಂಕಷ್ಟ

ಜಿಲ್ಲೆಯ

ಸುದ್ದಿ ಸಂಗ್ರಹ ಕಲಬುರಗಿ
ಮುಂಗಾರು–ಹಿಂಗಾರು ಮಳೆ ಸಮರ್ಪಕವಾಗಿ ಆಗದೆ ಬೆಳೆಗಳು ಬಾರದೆ ರಾಜ್ಯದ ಬಹುತೇಕ ಭಾಗದಲ್ಲಿ ಬರದ ಛಾಯೆ ಆವರಿಸಿರುವ ದುಃಸ್ಥಿತಿಯ ನಡುವೆ ಮಾರುಕಟ್ಟೆಯಲ್ಲಿ ಅಕ್ಕಿ, ಬೇಳೆ, ಜೋಳ, ಗೋಧಿ ಸೇರಿ ಅಗತ್ಯವಸ್ತುಗಳ ಬೆಲೆ ಏಕಾಏಕಿ ಏರಿಕೆ ಕಂಡಿರುವುದು ದುಡಿದು ತಿನ್ನುವ ವರ್ಗಕ್ಕೆ ಗರಬಡಿದಂತಾಗಿದೆ. ಮಳೆಗಾಗಿ ಮುಗಿಲು ನೋಡುವ ಜನ ಜೇಬು ಮುಟ್ಟಿ ನೋಡಿಕೊಳ್ಳುವಂತಾಗಿದೆ.

ಬರದ ಸಂಕಟದಲ್ಲಿದ್ದ ಜನತೆಗೆ ಬೆಲೆ ಏರಿಕೆಯಿಂದ ‘ಗಾಯದ ಮೇಲೆ ಉಪ್ಪು’ ಸವರಿದಂತಾಗಿದೆ. ಮಳೆ ಕೊರತೆಯಿಂದ ನದಿ, ಕೆರೆ–ಕಟ್ಟೆ, ಹಳ್ಳ–ಕೊಳ್ಳಗಳು ಒಣಗಿ ಜನ–ಜಾನುವಾರುಗಳಿಗೆ ಕುಡಿಯಲು ನೀರು, ಮೇವಿಲ್ಲದಂತಾಗಿದೆ. ಮತ್ತೊಂದೆಡೆ ರಾಜ್ಯ ಸರ್ಕಾರ ಹಾಲು ಮತ್ತು ಬಸ್‌ ಪ್ರಯಾಣ ದರ ಏರಿಕೆ ಮಾಡಿದ್ದನ್ನು ಅರಗಿಸಿಕೊಳ್ಳುವ ಮುನ್ನವೆ ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ದಂಗಾಗಿಸಿದೆ.

ಜೋಳ, ಗೋಧಿ, ಅಕ್ಕಿ, ತೊಗರಿ, ಕಡಲೆ, ಉದ್ದು–ಹೆಸರು, ಚನ್ನಂಗಿ ಇತ್ಯಾದಿ ಬೇಳೆಗಳು ಸೇರಿ ಅಗತ್ಯ ವಸ್ತುಗಳು ಬೆಲೆ ಏಕಾಏಕಿ ಶೇ. 25ರಿಂದ ಶೇ.35ರಷ್ಟು ಏರಿಕೆಯಾಗಿದೆ. ದಿನಗೂಲಿ ಮಾಡುವವರು ಪದಾರ್ಥಗಳು ಖರೀದಿಸುವಾಗ ಹಿಂದೆ–ಮುಂದೆ ನೋಡುವಂತಾಗಿದೆ. ಶಾಪಿಂಗ್‌ ಮಾಲ್‌, ಸಗಟು, ಚಿಲ್ಲರೆ ಅಂಗಡಿಯಲ್ಲೆ ಅಗತ್ಯ ವಸ್ತುಗಳು ಖರೀದಿಸಿ ಹಣ ಪಾವತಿಸುವಾಗ ಗ್ರಾಹಕರು ದಿಗ್ಭ್ರಮೆಗೆ ಒಳಗಾಗುತ್ತಿದ್ದಾರೆ.

ಕೆ.ಜಿ ಗೆ 50 ರೂ ಇದ್ದ ಸಾದಾ ಅಕ್ಕಿ ಈಗ 80 ರೂಂ ರಿಂದ 90ಕ್ಕೆ ಏರಿಕೆ ಕಂಡಿದೆ. 60ರಿಂದ 70 ರೂ ಇದ್ದ ಸ್ವಲ್ಪ ಉತ್ತಮ ಗುಣಮಟ್ಟದ ಅಕ್ಕಿ ಕೆ.ಜಿ.ಗೆ ಈಗ 100ಕ್ಕೂ ಹೆಚ್ಚಾಗಿದೆ. ಜೋಳ ಕೆ.ಜಿ 45 ರೂ ಇದ್ದದ್ದು, 100ರ ಆಸುಪಾಸು ತಲುಪಿದೆ. ತೊಗರಿ ಬೇಳೆ ಕೆ.ಜಿ.ಗೆ 130 ಇದ್ದದ್ದು 160 ಆಗಿದೆ. ಕಡಲೆ ಬೇಳೆ 80 ರೂ ಇದ್ದದ್ದು 110ಕ್ಕೆ ತಲುಪಿದೆ. ಸಕ್ಕರೆ ಕೆ.ಜಿ.ಗೆ 40 ಇದ್ದದ್ದು ಈಗ 60 ರೂ ಆಗಿದೆ. ಮೊಟ್ಟೆ ಬೆಲೆ 1 ಮತ್ತು ಮಸಾಲೆ ಪದಾರ್ಥಗಳಲ್ಲಿ ಶೇ‌.10ರಷ್ಟು ಏರಿಕೆ ಕಂಡಿದೆ. ಒಟ್ಟಲ್ಲಿ ‘ಬರ’ದ ಥೈಲಿಗೆ ಅಗತ್ಯ ವಸ್ತುಗಳ ದರ ಏರಿಕೆಯ ‘ಭಾರ’ವೂ ಸೇರಿಕೊಂಡಂತಾಗಿದೆ.

‘ನಿನ್ನೆ ಇದ್ದ ಅಕ್ಕಿ ಬೆಲೆ ಏಕಾಏಕಿ ಶೇ.25 ರಿಂದ ಶೇ.35 ರಷ್ಟು ಏರಿಕೆ ಕಂಡಿದ್ದರಿಂದ ದಿನಗೂಲಿ ಮಾಡಿ ಬದುಕುವವರು ಇಡಿ ದಿನದ ಕೂಲಿ ಸುರಿದರು ಮನೆಗೆ ಬೇಕಾದಷ್ಟು ಅಗತ್ಯ ವಸ್ತುಗಳು ತೆಗೆದುಕೊಂಡು ಹೋಗಲಾಗದಂತಹ ಸ್ಥಿತಿ ಉಂಟಾಗಿದೆ’ ಎನ್ನುತ್ತಾರೆ ವ್ಯಾಪಾರಿಯೊಬ್ಬರು.

‘ವಾರದ ಕೆಳಗೆ ಖರೀಸಿದ್ದ 10 ಕೆ.ಜಿ ಅಕ್ಕಿ ಈಗ ಕೊಳ್ಳಲು ಹೋದರೆ ಕೆ.ಜಿ.ಗೆ 60ರಿಂದ 70 ರೂ ಇದ್ದ ಬೆಲೆ 100ರ ಗಡಿ ದಾಟಿದೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ನೋಡಿದರೆ ಏನೂ ಖರೀದಿಸಲು ಮನಸ್ಸಾಗುತ್ತಿಲ್ಲ. ಹಾಗಾಂತ ಖಾಲಿ ಕೈಲೂ ಹೋಗಲಿಕ್ಕೆ ಆಗೋದಿಲ್ಲ’ ಎನ್ನುತ್ತಾರೆ ಗ್ರಾಹಕರೊಬ್ಬರು.

‘ಇನ್ನೂ ಹಾಲು ಮತ್ತದರ ಉತ್ಪನ್ನಗಳ ದರ ಮತ್ತು ಅಗತ್ಯ ವಸ್ತುಗಳ ಬೆಲೆಗಳ ಏರಿಕೆಯ ಪರಿಣಾಮ ಹೋಟೆಲ್, ಖಾನಾವಳಿ ಕ್ಯಾಂಟಿನ್, ರೆಸ್ಟೋರೆಂಟ್ ಹಾಯಯ ಮತ್ತು ಬೇಕರಿಗಳ ಮೇಲೂ ಬೀರಲಿದ್ದು, ಅವರು ಸಹ ಚಹಾ, ಕಾಫಿ, ಆಹಾರ– ಪದಾರ್ಥಗಳ ಬೆಲೆ ಏರಿಕೆ ಮಾಡುವ ಸಾಧ್ಯತೆಗಳಿವೆ. ಈಗಾಗಲೇ ತರಕಾರಿಗಳ ದರ ಹೆಚ್ಚಾಗಿದ್ದು, ಈ ದರದಲ್ಲೇ ಸಣ್ಣ ಪ್ರಮಾಣದಲ್ಲೇ ಏರಿಳಿತವಾಗುತ್ತಿದೆ ಹೊರತು ಇಳಿಯುವ ಲಕ್ಷಣಗಳಿಲ್ಲ’ ಎನ್ನುತ್ತಿದ್ದಾರೆ ಗ್ರಾಹಕರು.

ಕಿರಾಣಿ ಅಂಗಡಿ ಮಾಲೀಕ ಪ್ರಕಾಶ ಮಾತನಾಡಿ, ಮೊದಲು ವಾರಕ್ಕಾಗುವಷ್ಟು ಆರೇಳು ಕೆ.ಜಿ ಅಕ್ಕಿ, ಬೇಳೆ–ಕಾಳು, ಎಣ್ಣೆ ಖರೀಸುತ್ತಿದ್ದವರು ಬೆಲೆ ಏರಿಕೆಯಿಂದಾಗಿ ಒಂದೆರೆಡು ಕೆ.ಜಿ. ಖರೀದಿಸಿ, ನಾಳೆ ನೋಡೋಣ ಎನ್ನುತ್ತಿದ್ದಾರೆ.

ಶಹಾಪುರ ವ್ಯಾಪಾರಿ ಕೃಷ್ಣಾ ಮಾತನಾಡಿ, ಒಂದೆಡೆ ಬರದಿಂದ ಮೇವು–ನೀರಿಲ್ಲದೆ ಜಾನುವಾರು, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮನುಷ್ಯರು ಕಂಗಾಲಾಗಬೇಕಾದ ಕಾಲಕ್ಕೆ ತಲುಪಿದ್ದೆವೆ ಎಂದರು.

Leave a Reply

Your email address will not be published. Required fields are marked *