ಚಿಂಚೋಳಿ: ನಾಗರಾಳ ಜಲಾಶಯದಲ್ಲಿ ಪುತ್ರನ ಬಿಸಾಕಿ ಕೊಂದ ತಂದೆ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಕಲಬುರಗಿ
ತಂದೆಯೊಬ್ಬ ತನ್ನ ಕರುಳ ಕುಡಿಯನ್ನು ಕಿರು ಜಲಾಶಯಕ್ಕೆ ಎಸೆದು ಸಾಯಿಸಿದ ಹೃದಯ ವಿದ್ರಾವಕ ಘಟನೆ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ನಡೆದಿದೆ.

ದುರಂತ ನಡೆದ ಮೂರು ದಿನಗಳ ನಂತರ ಗುರುವಾರ
ಈ ಕೃತ್ಯ ಬೆಳಕಿಗೆ ಬಂದಿದೆ.

ತಾಲೂಕಿನ ಹಸರಗುಂಡಗಿ ಗ್ರಾಮದ ಕಲ್ಪನಾ ಹಾಗೂ ಸೋಮರಾವ್‌ ಹೂಗಾರ ದಂಪತಿಯ ಪುತ್ರ ಮಹೇಶ (2) ಮೃತ ಬಾಲಕ.

ಹಸರಗುಂಡಗಿಯ ಮಡಿವಾಳಪ್ಪ ಕರುಣಾದೇವಿ ದಂಪತಿಗೆ ಕೇವಲ ಇಬ್ಬರು ಪುತ್ರಿಯರಿದ್ದು ಗಂಡು ಮಕ್ಕಳಿರಲಿಲ್ಲ.

ಪುತ್ರಿ ಕಲ್ಪನಾ ಅವರನ್ನು ದೋಟಿಕೊಳ ಗ್ರಾಮದ ಸೋಮರಾವ್‌ ಹೂಗಾರ ಅವರೊಂದಿಗೆ ಮದುವೆ ಮಾಡಲಾಗಿತ್ತು. ಗಂಡು ಮಕ್ಕಳಿಲ್ಲದ ಕಾರಣ ಸೋಮರಾವ್ ಅವರನ್ನು ಮನೆ ಅಳಿಯನಾಗಿ ಮಾಡಿಕೊಂಡಿದ್ದರು. ಆದರೆ ಪತಿಯ ಕಿರುಕುಳದಿಂದ ಬೇಸತ್ತಿದ್ದ ಕಲ್ಪನಾ ತವರು ಮನೆಯಲ್ಲಿ ತಾಯಿ ಜೊತೆ ಇದ್ದಳು.

ಮಗನ ಜೊತೆ ಕೆಲ ಹೊತ್ತು ಆಟವಾಡಿ, ಹೇಳದೆ ಕೇಳದೆ
ಮಗನನ್ನು ತನ್ನ ಜೊತೆಗೆ ಕರೆದುಕೊಂಡು ಹೋಗಿ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಲ್ಲಿ ಎಸೆದಿದ್ದಾನೆ.

ಈ ಕುರಿತು ಮಗುವಿನ ತಾಯಿ ಕಲ್ಪನಾ ಚಿಂಚೋಳಿ ಠಾಣೆಗೆ ಮೊರೆ ಹೋದಾಗ ಪೊಲೀಸ್, ಅಗ್ನಿ ಶಾಮಕ ಅಧಿಕಾರಿಗಳು ಶೋಧ ನಡೆಸಿದಾಗ ಜಲಾಶಯದಲ್ಲಿ ಬಾಲಕನ ಶವ ಪತ್ತೆಯಾಗಿದೆ.

ಸದ್ಯ ಮಗುವಿನ ಶವ ಜಲಾಶಯದಿಂದ ಹೊರ ತೆಗೆದು ಚಿಂಚೋಳಿ ತಾಲ್ಲೂಕು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಡಿವೈಎಸ್ಪಿ ಸಂಗಮನಾಥ ಹಿರೇಮಠ, ಸಿಪಿಐ ಕಪಿಲದೇವ, ಪಿಎಸ್‌ಐ
ಗಂಗಮ್ಮ ಜಿನಿಕೇರಿ ಭೇಟಿ ನೀಡಿ ಪರಿಶೀಲಿಸಿದರು.

ಆರೋಪಿ ಸೋಮರಾವ್‌ ಹೂಗಾರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ

Leave a Reply

Your email address will not be published. Required fields are marked *